ಒಬ್ಬಂಟಿಯೆನ್ನುವುದೇ ಸುಳ್ಳಿರಬೇಕು!
ನಮ್ಮೊಂದಿಗೆ ನೆಲವೊಂದು ನಡೆಯುತ್ತಿರುತ್ತದೆ
ತಂಗಾಳಿಯೊ ಬಿಸಿಗಾಳಿಯೊ ಬೀಸುತ್ತಲೇ ಇರುತ್ತದೆ
ಬಾನು ಹಗಲಿರುಳಿಗೆ ತಕ್ಕ ಆಕಾರ ಪಡೆದಿರುತ್ತದೆ
ಚಂದ್ರನಂತೂ ನಕ್ಷತ್ರಗಳ ಕಟ್ಟಿಕೊಂಡೇ ತಿರುಗುತ್ತಾನೆ
ಬೀದಿಯಲ್ಲಿ ಜನರು ಓಡಾಡುತ್ತಲೇ ಇರುತ್ತಾರೆ
ಪಾರ್ಕಿನಲ್ಲಿ ಪಕ್ಕ ಯಾರೋ ಕುಳಿತುಕೊಳ್ಳುತ್ತಾರೆ
ಬೇಕೋ ಬೇಡವೋ ತರಕಾರಿಯವರ, ಹೂವಿನವರ
ದನಿ ಕಿವಿಗೆ ಬಂದು ಬಂದು ತಾಗುತ್ತಿರುತ್ತದೆ
ಕರೆಯದೆ ನಾಯಿಯೊಂದು ಹಿಂಬಾಲಿಸುತ್ತದೆ
ಕಣ್ಣುತಪ್ಪಿಸಿದೆ ಎನ್ನುವಂತೆ ಬೆಕ್ಕು ರಸ್ತೆ ದಾಟುತ್ತದೆ
ನೆರೆಮನೆಯವರು ಬಟ್ಟೆ ಕೊಡವಿ ಹರವುತ್ತಿರುತ್ತಾರೆ
ಎಲ್ಲಿಂದಲೋ ಹಾರಿಬಂದ ಎಲೆ ಮನೆಯ ಮುಂದೆ!
ಇಲ್ಲಿ ಬಂದು ತಾಗುವ ನೂರು ಕತೆಗಳ ಕೇಳುತ್ತ
ಅಥವಾ ನಾನೇ ದಿನಕ್ಕೊಂದು ಕತೆ ಹೆಣೆಯುತ್ತಾ
ನೆಲದೊಂದಿಗೆ ನಿಂತೋ, ನಡೆದೋ, ಕೂತೋ
ಒಬ್ಬಂಟಿಯಲ್ಲವೆಂದು ಸಾಬೀತುಪಡಿಸಿಕೊಳ್ಳುತ್ತೇನೆ!
-ಎಂ ಆರ್ ಕಮಲ, ಬೆಂಗಳೂರು
—–