ನಂಟು
ತರಕಾರಿ ಅಂಗಡಿಯಲಿ
ಬೆಂಡೆ ಕಾಯಿ ತುದಿ ‘ಚಟ್’ ಅಂತ ಮುರಿದು ತೋರಿಸಿ
ಎಳೆಕಾಯಿ ಅಂತ ಖಾತ್ರಿಯಾದ
ಮೇಲೆಯೇ ತಕ್ಕಡಿಗೆ ಹಾಕುವ ವಿದ್ಯೆ ಕಲಿಸಿದವಳು;
ಈ ಅಪರಾತ್ರಿ
ವಿನಾಕಾರಣ ನೆನಪಾಗುತ್ತಾಳೆ.
ಆ ಮೇಲೆ ಈ ಬೆಂಡೆ ಕಾಯಿಗೆ
‘ಲೇಡಿ ಫಿಂಗರ್’ ಅಂತ ನನಗೆ
ಅರ್ಥವಾದ ದಿನ;
ಬೆಂಡೆಕಾಯಿ ನೋಡಿದಾಗಲೆಲ್ಲ
ಅವಳ ಬೆರಳುಗಳೆ ಕಣ್ಣ ಮುಂದೆ
ಮೂಡಿ ಕಂಗೆಟ್ಟು ತಿನ್ನುವುದನ್ನೆ ಬಿಟ್ಟಿದ್ದೆ.
ಉಳಿದು ಕೊಂಡಿವೆ ಇನ್ನೂ
ನನ್ನಲ್ಲಿ ಅಳಿಯದ ಅವಳ ಕುರುಹುಗಳು
ರೊಟ್ಟಿಯಂಚಿಗೆ ತಟ್ಟಿದ ಅವಳ
ಬೆರಳುಗಳ ಗುರುತು ನನ್ನ ಸಣ್ಣ ಕರುಳಿಗಂಟಿಕೊಂಡು;
ಕರಳು ಹಿಂಡುತ್ತವೆ ನೀಳ ಬೆರಳುಗಳು
ಹೊತ್ತಲ್ಲದ ಹೊತ್ತಿನಲ್ಲಿ;
ಗುರುತು ಅಳಿಸಿದರೆ ಅವಳಿಲ್ಲ;
ಅಳಿಸದೆ ಹೋದರೆ ನಾನು ಇಲ್ಲ.
-ಎಲ್ವಿ, ಬೆಂಗಳೂರು