ಬಣ್ಣ ಬಳೆದ ನಿತ್ಯವೊ….!
ಬಣ್ಣಗಳಿಲ್ಲದ ಬದುಕು ಉಂಟೆ
ಬಣ್ಣವೆ, ಬದುಕಿನ ಹೆಸರೆ ಬಣ್ಣ
ಹೆಜ್ಜೆ ಹೆಜ್ಜೆಗೂ ಹೊಸ ಬಣ್ಣದಂಚು
ಇಂಚಿಂಚಿಗೂ ಹೊಸತು ಕುಸುರಿ
ನೋವು ನಲಿವು ಸುಖ ದು:ಖ
ಹಗಲು ರಾತ್ರಿ ಬೆಳಕು ಕತ್ತಲು
ದಿನ ದಿನಕೂ ಹೊಸ ರಂಗು ತುಂಬೆ
ಈ ಬದುಕು ಬೆಳಕು ಬಣ್ಣದಂಗಳ
ಶುಭ್ರ ಶ್ವೇತ ಜಗದಂಗಳದ ಬೆಳಕು
ಕಪ್ಪು ಕತ್ತಲೆಯ ಗರ್ಭದೊಳಗೆ ತಾವು
ಆ ಕಾವಳದ ಗೂಡು ಸೀಳಿ ಚಿಮ್ಮಿದೆ
ಬೆಳಕಿಗೆ ಬಾಯ್ದೆರೆದು ಕಾಯ್ವ ಜೀವದೆಳೆ
ಕಾಯ್ವಾಸೆ ಬಲಿತು ಬೇಲಿ ಹಾರಿ ಜಿಗಿದು
ಬಿಸುಪು ಬಿರಿದು ಬಿಳುಪು ಕರಗಿ ಹರಿದು
ಚಿಮ್ಮಿ ಸಪ್ತ ವರ್ಣ ಭೋರ್ಗರೆದು ಸುರಿದು
ತೇಲುತಿದೆ ಬಾಳ ದೋಣಿ ಗುರುತು ಮರೆತು
ಕುಣಿದು ರಂಗಿನಂಗಳದಿ ಮೈಮರೆತು
ಮರೆಯಿತದು ತನ್ನಿರುವು ತನ್ನ ಠಾವು
ಕಳೆದು ಸುಳಿಯಲಿ ಕನಸ ಲೋಕದಲಿ
ರಂಗಯ್ಯನ ರಂಗಿನೆರಚಾಟದಲಿ!
ಇದು ಬಣ್ಣ ಬಳೆದ ನಿತ್ಯವೊ ಇದು ಸತ್ಯ!
-ಸರೋಜಿನಿ ಪಡಸಲಗಿ
ಬೆಂಗಳೂರು
ಹೋಳಿ ಹಬ್ಬದ ಬಣ್ಣದೋಕುಳಿಯನ್ನು ಪದಗಳೋಕುಳಿಯಲ್ಲಿ ರೂಪಿಸಿದ ಚಂದದ ಕವನ! ಮುದ ತಂದಿತು! ಶ್ರೀವತ್ಸ