ಶಂಕರಘಟ್ಟ, ಮಾ.21: ಸಾಮರಸ್ಯದಿಂದ, ಸೌಹಾರ್ದಯುತ ಮತ್ತು ಸೌಜನ್ಯವಾಗಿ ಬದುಕುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾಪುರುಷ ಡಾ.ಅಂಬೇಡ್ಕರ್ ಅವರು ಸಾರ್ವಕಾಲಿಕ ನಾಯಕ ಎಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಾಬೀರ ಅಹ್ಮದ್ ಮುಲ್ಲಾ ಅವರು ಬಣ್ಣಿಸಿದರು. ಅವರು ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಪದವಿ ಕಾಲೇಜುಗಳ ಪ್ರಾಧ್ಯಾಪಕರುಗಳಿಗೆ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಮತ್ತು ಸಮಗ್ರ ಅಭಿವೃದ್ಧಿ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯರು ಮನುಷ್ಯರಾಗಿ ಬದುಕುವುದು ಹೇಗೆ ಎಂದು ಹೇಳಿಕೊಟ್ಟ ಮಹಾಮಾನವತಾವಾದಿ ಎಂದುಹೇಳಿದರು. ಅಧ್ಯಾಪಕರುಗಳು ಮಾನವೀಯತೆಯ ನಿಧಿಯಾದ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ನಿಕಾಯದ ಡೀನರು ಆದ ಡಾ.ಜಗನ್ನಾಥ ಕೆ . ಡಾಂಗೆ ಅವರು ಮಾತಾಡಿ, ಪಠ್ಯಗಳಲ್ಲಿ ಅಂಬೇಡ್ಕರ್ ಅವರ ಸಾಧನೆಯನ್ನು ಸೇರ್ಪಡೆ ಮಾಡಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಕೆ. ಆರ್ ಮಂಜುನಾಥ್, ಡಾ.ಎ.ಬಿ.ರಾಮಚಂದ್ರಪ್ಪ, ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಉಪಸ್ಥಿತರಿದ್ದರು. ಎಂ.ಸಂಪತ್ ಕುಮಾರ್, ಓಬಳೇಶ್ ಟಿ. ಮಂಜುನಾಥಯ್ಯ, ಆರ್.ರವಿಕುಮಾರ್ ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರುಗಳು ಭಾಗವಹಿಸಿದ್ದರು.