ತೆಕ್ಕಲಕೋಟೆ, ಮಾ.21: ಪ್ರತಿಯೊಬ್ಬ ವಿದ್ಯಾರ್ಥಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕುರುಗೋಡು ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ರಾಮಕೃಷ್ಣ ಅವರು ಹೇಳಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಬಳ್ಳಾರಿ ನೆಹರು ಯುವಕೇಂದ್ರ ಹಾಗೂ ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸಹಯೋಗದಲ್ಲಿ ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಕಸಿತ ಭಾರತ ಯುವ ಸಂಸತ್ತು-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ಸದೃಢ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಪ್ರತಿಯೊಬ್ಬ ಯುವಕರು ಮಾನವೀಯ ಮೌಲ್ಯ ಅಳವಡಿಸಿಕೊಂಡು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ನಂಬಿಕೆ, ವಿಶ್ವಾಸದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿ ನೆಹರೂ ಯುವಕೇಂದ್ರದ ಅಧಿಕಾರಿ ಮೊಂಟು ಪಟಾರ್ ಮಾತನಾಡಿ, ಯುವ ಸಂಸತ್ತು ಸ್ಪರ್ಧೆಯು ವಿದ್ಯಾರ್ಥಿಗಳು ರಾಜಕೀಯ ಚರ್ಚೆಯಲ್ಲಿ
ಪಾಲ್ಗೊಳ್ಳಲು ಅನುಕೂಲಕರವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಹೊಸ ಆಲೋಚನೆಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ರಾಜ್ಯ ಮಕ್ಕಳ ಹಕ್ಕು ಆಯೋಗದ ಮಾಜಿ ಸದಸ್ಯ ಡಾ. ಎಚ್ಸಿ.ರಾಘವೇಂದ್ರ ಮಾತನಾಡಿ, ನೈತಿಕ ಮೌಲ್ಯಗಳ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಯುವ ಸಂಸತ್ತಿನ
ನಾಯಕರಾಗುವ ಮೂಲಕ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತೆಕ್ಕಲಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಅವರು ಮಾತನಾಡಿ, ವಿಕಸಿತ ಭಾರತ ಯೋಜನೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಕುಮಾರ್, ಡಾ.ಶಾಂತಲಾ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಎ.ಎಸ್.ಬಸವರಾಜ, ಮುರುಳಿಶಂಕರಗೌಡ, ಡಾ.ಶಶಿಕಾಂತ್, ಡಾ.ಚಂದ್ರಕಾಂತ್ ಹಾಗೂ ಅಧ್ಯಾಪಕರು, ಸ್ಪರ್ಧಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
—–