ವಿಶ್ವಾಸ
ಕಳಕೊಂಡೆ ಏಕೋ ಮಾನವ
ನೀ ಕಳಕೊಂಡೆ ಏಕೋ
ನಿಯತ್ತು , ನಂಬಿಕೆ ಕಳಕೊಂಡೆ ಏಕೋ.
ಜಾಣ ನೀನೆಂದು ಜಗದಿ ಬೀಗುತಿರುವೆ
ಆ ನುಡಿಯನ್ನೇಕೋ ನೀ ಮರೆತಿರುವೆ
ಮಾತು ಬಲ್ಲವ ನಾನೊಬ್ಬನೆಂದೇ
ಅಹಂಕಾರ ಮದದಿ ಮೆರೆಯುತಲಿರುವೆ.
ಕೊಟ್ಟ ಮಾತಿಗೆ ತಪ್ಪಿ ನಡೆಯುವೆ
ಸತ್ಯ ಮುಚ್ಚಿಟ್ಟು ಮಿಥ್ಯ ನುಡಿಯುವೆ
ಸಾರಿಸಿ ಸಮಜಾಯಿಷಿ ಪುಸಲಾಯಿಸಿ
ಭರವಸೆ ಇತ್ತು ಬಾರದೆ ಹೋಗುವೆ.
ಕಾರ್ಯ ಸಾಧನೆಗೆ ಕಾಲು ಹಿಡಿಯುವೆ
ಕೈಗೂಡಿದ ಮೇಲೆ ಕೈಯ ಕೊಡುವೆ
ಹಿಡಿದ ಕಾರ್ಯ ಕೈಗೆಟುಕದೆ ಹೋದರೆ
ಮೋಸದ ಜಾಲ ಬೀಸಿ ಗೆಲ್ಲುವೆ.
ಬಲ್ಲವರ ಕಂಡು ಹೊಟ್ಟೆ ಕಿಚ್ಚು ಪಡುವೆ
ಕಾಲೆಳೆಯಲು ಸದಾ ಯೋಚನೆ ಮಾಡುವೆ
ತಂತ್ರ , ಕುತಂತ್ರ , ಷಡ್ಯಂತ್ರ ರೂಪಿಸಿ
ಕಂದಕಕ್ಕೆ ಕೆಡವಿ ನಕ್ಕು ನಲಿಯುವೆ.
ನಿಯತ್ತಿಗೆ ಹೆಸರಾದ ಶ್ವಾನ ಸಲಹುವೆ
ನಿನ್ನ ಮನೆ ಸ್ವಂತ ಮಗನಂತೆ
ನಿನ್ನಂತೆ ಇರುವ ಮನುಜರ ನೋಡುವೆ
ಮಾತ್ಸರ್ಯ ತುಂಬಿದ ದಾಯಾದಿಗಳಂತೆ.
ನಂಬಿಕೆಯ ಮೇಲೆ ಜಗವು ನಿಂತಿದೆ
ನಿನ್ನಿಂದಲೇ ಅದು ಹಾಳಾಗುತಲಿದೆ
ನಾಯಿಗಿಂತ ಕೀಳಾಗಿ ಬಾಳುವೆ ಏತಕೆ
ವಿಶ್ವಾಸ ಹೊತ್ತರೆ ಶ್ರೇಷ್ಠತೆ ನಿನ್ನದೆ.
✍️ಡಾ. ಮಹೇಂದ್ರ ಕುರ್ಡಿ, ಹಟ್ಟಿ