ನಮ್ಮೊಳಗಿರುವ ಬೆಳಕು
ನಿಜ ಹೇಳಲೇ…
ನಮ್ಮ ಹಿಂಜರಿಕೆಗೆ ಕಾರಣ
ನಮ್ಮೊಳಗಿರುವ ಅಂಧಕಾರವಲ್ಲ
ಒಳಗೇ ಇರುವ ಅಗಾಧ ಬೆಳಕಿನದ್ದು
ನಮ್ಮೊಳಗಿರುವ ಆಳವಾದ ಭಯ
ನಮ್ಮಲ್ಲಿರುವ ಅಸಮರ್ಥತೆಗಳದ್ದಲ್ಲ
ನಮ್ಮೊಳಗಿರುವ ಆಳವಾದ ಭಯ
ಹೆಪ್ಪುಗಟ್ಟಿರುವ ಅಂತರ್ಶಕ್ತಿಯದ್ದು
ನಮ್ಮ ಬಗ್ಗೆ ನಮಗೇ ಅನುಮಾನ
ಏನಿದೆ ಅರ್ಹತೆ ನಮಗೆ? ಸುಂದರ
ಪ್ರತಿಭಾವಂತ , ಅಸಾಧಾರಣ
ಅದ್ಭುತವೆನಿಸಿಕೊಳ್ಳಲು ನಾವು
ಆದರೆ ಒಂದಂತೂ ನಿಜ
ನಮ್ಮೊಳಗಿರುವ ಭಗವಂತ
ಅವನ ಬೆಳಕು, ಪ್ರಭೆ ಎಲ್ಲವೂ
ಅಸಾಧಾರಣ, ಅದ್ಭುತವಾದದ್ದು
ನಮ್ಮೊಳಗಷ್ಟೇ ಅಲ್ಲ
ಇವರು ಅವರು , ಎಲ್ಲರಲ್ಲೂ
ಇರುವ ಅವನ ಅಸಾಧಾರಣ
ಪ್ರಭೆ ಕತ್ತಲಾಚೆ ಹೊಳೆಯುವಂತದ್ದು
ಆದ್ದರಿಂದಲೇ ಬೆಳಕಿಗೆ ಹೆದರದೆ
ಒಳಗಿರುವ ಅದ್ಭುತವ ಸಂಶಯಿಸದೆ
ಪ್ರಜ್ವಲಿಸಿಬಿಡಬೇಕು ನಾವೆಲ್ಲರೂ
ಅನನ್ಯ ಬೆಳಕಿನಲ್ಲಿ ಹಿಂಜರಿಯದೆ
ಆಗ ಮಾತ್ರ ಸಂಪೂರ್ಣವಾಗಿ
ಅನಾವರಣಗೊಳ್ಳುವುದು
ನಮ್ಮೊಳಗಿರುವ ಅದ್ಭುತ
ಬೆಳಕಿನ ಕಥನ….
-ರೂಪ ಗುರುರಾಜ್, ಬೆಂಗಳೂರು
—–