ತನಗಗಳು
೧
ಯುಗಾದಿಯ ಹಬ್ಬಕೆ
ಹೊಸತು ಸಂವತ್ಸರ
ಮರೆಯೋಣ ನಾವೆಲ್ಲ
ಹಿಂದಿನೆಲ್ಲ ಮತ್ಸರ
೨
ವಸಂತಾಗಮನಕೆ
ಹೊಂಗೆ ಹೂವಿನ ಘಮ
ದುಂಬಿಗಳ ದಾಂಗುಡಿ
ಸಂಗೀತದ ಸಂಭ್ರಮ
೩
ಸುಖ ದುಃಖಗಳವು
ಬೇವು ಬೆಲ್ಲಗಳಂತೆ
ಯುಗಾದಿ ನೆಪದಲಿ
ಬಿಡೋಣ ಎಲ್ಲ ಚಿಂತೆ
೪
ಬೋಳಾದ ಮರತುಂಬ
ಚಿಗುರಿನ ತೋರಣ
ಮೊಗ್ಗು ಹೂವಿನ ಮಧ್ಯೆ
ಮಿಡಿಕಾಯಿ ಕಂಕಣ
೫
ಒಣಗಿದ ಮರದಿ
ಹಸಿರಿನ ಹಂದರ
ಶಿಶಿರದ ಮೌನಕೆ
ವಸಂತದ ಉತ್ತರ
೬
ಸಿಹಿ ಕಹಿಗಳವು
ಬದುಕಿನ ಹೂರಣ
ಸಂತಸ ಬದುಕಿಗೆ
ಸಮಚಿತ್ತ ಕಾರಣ
-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ