ಯುಗಾದಿ ಮತ್ತೆ ಬರುತಿದೆ…..
ನಿನ್ನೆಗಳ ಬಿಡದೆ ಗುಡಿಸಿ ಪೇರಿಸಿ
ಅದರೊಡಲಲಿ ಹಸಿರು ಚಿಗುರಿಸಿ
ಕೆಂದಳಿರ ನೆರಳಲಿ ಪವಡಿಸಿ ಕಣ್ಬಿಟ್ಟ
ಮರಿ ಹಕ್ಕಿ ಕೊರಳಲಿ ರಾಗ ನುಡಿಸಿ
ಮೈಮರೆಸಿ ತೆರೆ ಒಂದ ಪಸರಿಸುತ
ಯುಗಾದಿ ಮತ್ತೆ ಬರುತಿದೆ
ಸಮಯದ ಬೆನ್ನೇರಿ ಹುಸಿ ನಗುತ
ಹೊಸ ಆಸೆ ಕನಸುಗಳ ಹೂವರಳಿಸಿ
ಕಣ್ಣ ತುಂಬ ನಿರೀಕ್ಷೆ ಚುಕ್ಕಿ ಮಿಂಚಿಸಿ
ಕಳೆದ ಗಳಿಗೆಗಳ ಕೊನೆಗಣ್ಣಲಿ ನೋಡಿ
ಮೆಲು ಹೆಜ್ಜೆ ಇಟ್ಟು ಮೋಡಿ ಮಾಡುತ
ಯುಗಾದಿ ಮತ್ತೆ ಬರುತಿದೆ
ಈ ದಿನದ ಗರ್ಭದಿ ಮೊಳೆತ ನಾಳೆಯ
ಹೊಸ ಕಿರಣಗಳ ತೊಟ್ಟಿಲಲ್ಲಿ ತೂಗುತ
ಅದೆ ರಾಗ ತಾನ ಹೊಸ ಶ್ರುತಿಲಿ ಹಾಡಿ
ಬದಲಾಗದ ದಾರಿ ಹೊಸತು ಪಯಣ
ಇದುವೆ ಬದುಕೆಂದು ಅಡಿಗಡಿಗೆ ಸಾರುತ
ಯುಗಾದಿ ಮತ್ತೆ ಬರುತಿದೆ
-ಸರೋಜಿನಿ ಪಡಸಲಗಿ
ಬೆಂಗಳೂರು