ಬಳ್ಳಾರಿ: ಬರುವ (2021ರ) ಜನವರಿಯಿಂದ ನಗರದಲ್ಲಿರುವ ಹೋಟೆಲ್‍ಗಳು ಮತ್ತು ವಾಣಿಜ್ಯ ಮಳಿಗೆಗಳಿಂದ ಮಹಾನಗರ ಪಾಲಿಕೆಯು ಕಸ ನಿರ್ವಹಣೆ ಶುಲ್ಕವನ್ನು ವಸೂಲಿ ಮಾಡಲಿದೆ ಎಂದು ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದರು.
ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊದಲ ಹಂತದಲ್ಲಿ ಉದ್ದಿಮೆದಾರರಿಂದ ಕಸ ಸಂಗ್ರಹ ಶುಲ್ಕವನ್ನು ವಸೂಲು ಮಾಡಲು ನಿರ್ಧರಿಸಲಾಗಿದ್ದು,ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಂತರ ಸಾರ್ವಜನಿಕರಿಂದ ಶುಲ್ಕ ವಸೂಲು ಮಾಡಲು ನಿರ್ಧರಿಸಲಾಗಿದೆ ಎಂದರು.
ಬಳ್ಳಾರಿ ನಗರದಲ್ಲಿ ಎಲ್ಲೆಂದರಲ್ಲಿ ಕಸದರಾಶಿ ಕಣ್ಣಿಗೆ ರಾಚುತ್ತಿದ್ದು,ಇದನ್ನು ಬದಲಾಯಿಸುವುದು ನಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿಲ್ಲ. ವಾಣಿಜ್ಯ ಮಳಿಗೆಗಳು, ಹೋಟೆಲ್‍ಗಳ ಮಂದಿ ರಾತ್ರಿ ರಸ್ತೆಗೆ ಕಸ ತಂದು ಸುರಿಯುತ್ತಾರೆ. ಅದನ್ನು ಬೆಳಿಗ್ಗೆ ನಮ್ಮ ಪೌರಕಾರ್ಮಿಕರು ವಿಲೇವಾರಿ ಮಾಡುತ್ತಾರೆ. ಇದು ಸದ್ಯದ ಅವ್ಯವಸ್ಥೆಯಾಗಿದೆ ಎಂದರು.
ಬಳ್ಳಾರಿಯಲ್ಲಿ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದಂತೆ ‘ಬಿಬಿಎಂಪಿ, ಮೈಸೂರು ಸೇರಿದಂತೆ ವಿವಿಧೆಡೆ ಗಣನೀಯವಾಗಿ ಘನ ಕಸದ ವೈಜ್ಞಾನಿಕ ನಿರ್ವಹಣೆಯನ್ನು ಮಾಡುತ್ತಿರುವ ಏಜೆನ್ಸಿಗಳನ್ನು ಸಂಪರ್ಕಿಸಲಾಗಿದೆ. ಅಂಥ ಏಜೆನ್ಸಿಗಳ ಮೂಲಕವೇ ಕಸ ನಿರ್ವಹಣೆ ಕಾರ್ಯವನ್ನು ಇನ್ಮುಂದೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ನಗರದ ವಿವಿಧ ಪ್ರದೇಶಗಳಲ್ಲಿ ಕಸ ಹೇಗೆ ಸಂಗ್ರಹವಾಗುತ್ತಿದೆ. ವಿಲೇವಾರಿ ಹೇಗೆ ನಡೆದಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸದ್ಯ ಕಸ ನಿರ್ವಹಣೆಗೆ ಮಾನವ ಸಂಪನ್ಮೂಲಕ್ಕಿಂತಲೂ ಯಂತ್ರಗಳು ಮತ್ತು ವಾಹನಗಳು ಹೆಚ್ಚು ಬೇಕಾಗಿವೆ. ಮನೆಗಳಿಗಂದ ಕಸ ಸಂಗ್ರಹಿಸಲು 100 ವಾಹನಗಳು ಬೇಕಾಗಿದ್ದು, ಸದ್ಯ 62 ವಾಹನಗಳμÉ್ಟೀ ಇವೆ. ಮೂರು ತಿಂಗಳಲ್ಲಿ ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದರು.
*ಕಸ ಬಿಸಾಡಿದರೇ ಕ್ರಮ: ಕಸವನ್ನು ಪಾಲಿಕೆ ಸಿಬ್ಬಂದಿಗೆ ನೀಡದೆ ಎಲ್ಲೆಂದರಲ್ಲಿ ಕಸ ಎಸೆದವರಿಂದ ದಂಡಶುಲ್ಕ ವಸೂಲು ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಎಚ್ಚರಿಸಿದ್ದಾರೆ.
ಕಸ ವಿಂಗಡಣೆ ಮಾಡದೇ ಇದ್ದರೂ ದಂಡ ಶುಲ್ಕ ವಿಧಿಸಲು ಅವಕಾಶವಿದೆ. ಈ ನಿಯಮಗಳನ್ನು ನಿಧಾನವಾಗಿ ಜಾರಿಗೊಳಿಸಲಾಗುತ್ತದೆ ಎಂದರು.
ನಗರವನ್ನು ಬಯಲುಶೌಚ ಮುಕ್ತಗೊಳಿಸುವುದು ಮತ್ತು ಎಲ್ಲ ಮನೆಗೂ ಶೌಚಾಲಯ ಸೌಕರ್ಯವಿರುವಂತೆ ವ್ಯವಸ್ಥೆ ಮಾಡುವ ಸವಾಲು ಪಾಲಿಕೆ ಮುಂದಿದೆ. ಶೇ 100ರಷ್ಟು ಬಯಲು ಶೌಚಮುಕ್ತಗೊಳಿಸುವ ಸಲುವಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು.
*ಬಳ್ಳಾರಿ ಸಿಟಿರೌಂಡ್ಸ್;ಸಮಸ್ಯೆಗಳ ದರ್ಶನ: ಬಳ್ಳಾರಿ ನಗರದಲ್ಲಿ ಬೆಳಗ್ಗೆ 6ರಿಂದ 9ರವರೆಗೆ ಕಳೆದ ಒಂದು ವಾರದಿಂದ ನಗರ ಪ್ರದಕ್ಷಿಣೆ ಮಾಡುತ್ತಿದ್ದು, ನಗರದ ಸಮಸ್ಯೆಗಳು ಅನಾವರಣವಾಗುತ್ತಿವೆ ಎಂದು ಆಯುಕ್ತೆ ಪ್ರೀತಿ ಗೆಹ್ಲೋಟ್ ಹೇಳಿದರು.
ಕಸದ ರಾಶಿ, ಬೀದಿಬದಿ ವ್ಯಾಪಾರಿಗಳ ಸಮಸ್ಯೆ,ಕುಡಿಯುವ ನೀರಿನ ಸಮಸ್ಯೆ, ರಸ್ತೆ, ತಗ್ಗು-ಗುಂಡಿಗಳು,ಡ್ರೈನೆಜ್ ಬ್ಲಾಕ್ ಸೇರಿದಂತೆ ಅನೇಕ ಸಮಸ್ಯೆಗಳು ಕುರಿತು ಜನರು ತಿಳಿಸುತ್ತಿದ್ದು, ಆ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಇದ್ದರು.
—