ಶಬರಿಯ ಫಲದ ಬರಗೂರರು
ತುಂಬಿದ ಕೆರೆ ನದಿ ಹಳ್ಳಗಳಂತೆ
ಪ್ರೀತಿ
ಹಿಂಗಿದರೂ ನೆಲದ ಪಸೆ ಆರದು
ಬಿತ್ತಿದ ಬೀಜಗಳು ಮೊಳಕೆಯೊಡೆದು
ಫಸಲಾಗುವುದರ ಕಂಡು ಸಂತಸ ಪಡುವ
ಹಕ್ಕಿಬಾಳಿನಂತೆ ಸಾಂಗತ್ಯದ ಪ್ರೀತಿ
ಗೂಡು ಕಟ್ಟಿ ಪರಂಪರೆ ಪಿಸು ಮಾತನುಣಿಸಿ
ನೊಂದ ಎದೆ ತಾವಿನಲ್ಲಿ
ಗಡಿಗಳಿಲ್ಲದ ಮನುಜ ಜೀವ ಪ್ರೀತಿಯ ಬಳ್ಳಿ ಹಬ್ಬಿಸಿದ ಹುಡುಗ
ಕನಸುಗಣ್ಣಿನ ಜೀವಕ್ಕೆ ಎಷ್ಟೊಂದು ಪ್ರಾಯಗಳು
ಎಚ್ಚರದ ದನಿಗಳು,ಜ್ಞಾನದ ದಶಾವತಾರದ ನಿಲುವುಗಳು ಸೃಜನ ವಿಮರ್ಶೆ ವೈಚಾರಿಕತೆ ಸಂಶೋಧನೆ
ನಾಡು-ನುಡಿಯ ರೂಪಕ
ಜನ ಚರಿತೆಯ ಕಾಲ್ಜಾಡಿನಲ್ಲೇ ಬೆರೆತ
ಬಂಡಾಯದ ಮಿಳಿತ
ಕಲೆ ಸಾಹಿತ್ಯ ಸಿನಿಮಾ ಅಲ್ಲೂ ಬರಗೂರರ ಛಾಪು
ಬದುಕ ಯುದ್ಧದಂಗಳದಲ್ಲಿ ನಿಂತು ಶಾಂತಿ ಪಾರಿವಾಳವ ಹಾರಿಬಿಟ್ಟ ಬಾಪು!
ಹೋಲಿಸಬಾರದು ಬಾಪುವಿಗೆ,ಹೋಲಿಸುವಂತಿದ್ದರೆ ಹೇಳಲು ಅಂಜಬಾರದು
ಜಾತಿ ವರ್ಗ ಧರ್ಮ ಭಾಷೆ ಅಸಮಾನತೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ.ಆದರೆ ಘೋಷಣೆಯಲ್ಲದ ತಪ್ತ ಒಳ ಆಧ್ಯಾತ್ಮದ ಪ್ರಖರ ಬೆಳಕು.
ಬರಗೂರರು ಮೇಷ್ಟ್ರು ಆದದ್ದು ನನಗೆ ನೇರ ಪಾಠ ಮಾಡಿಯಲ್ಲ.,ನಮ್ಮ ಕಾಲಕ್ಕೆ ವಿವೇಕ ಕಲಿಸುತ್ತಲೇ ನಮ್ಮನ್ನು ಬೆಳೆಸಿದ ಪರಿಗೆ
ಕನ್ನಡ ಜನಪದಕ್ಕೆ ಶ್ರೀವಿಜಯ ತುಂಬಿದ ಆತ್ಮವಿಶ್ವಾಸದ ನುಡಿಯಂತೆ ಬರಗೂರರು ಬಾಳಿದರು
ಬಾಳುತ್ತಿರುವವರು
ಕಾಗೆ ಒಂದಗುಳು ಕಂಡರೆ ಕರೆಯುವ ತನ್ನ ಬಳಗದ ಮಮತೆಯಂತೆ ಬರಗೂರರು
ನಮ್ಮೆಲ್ಲರಿಗೆ ಪರಸ್ಪರ ಪ್ರೀತಿಸುವ ಹೃದಯದ ಭಾಷೆ ಹಂಚಿದವರು
ಇಲ್ಲಿ ಶಬರಿಯಂತೆ ಫಲವ ನೀಡಿ ವೃಕ್ಷವಾದವರು.
-ಡಾ.ನಿಂಗಪ್ಪ ಮುದೇನೂರು, ಧಾರವಾಡ
—–