ಅನುದಿನ ಕವನ-೧೫೮೦, ಕವಿ: ಡಾ. ಆನಂದ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ:ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ…

ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ…

ಆ ಹಾಡ ಸಾಲಿನಂತೆ ಈ ಹೂ
ಬಳಿ ಬರೆದೆಯೂ ಎದೆಯ ತಾಕಿ
ಹೃದಯದಲ್ಲಿ ಬೇರಿಳಿಸಿ ಸೆಟೆದು
ಶಲಾಕಾಗ್ರ ಪಕಳೆಗಳ ಹರಡಿದ್ದಕ್ಕೋ
ಏನೋ…. ದುಂಬಿಗಳದೇ ಕಾಟ!!

ನಭೋ ಮುಖಿ ನತ್ತ ಈ ಮುತ್ತು
ಮತ್ತೆ ಮತ್ತೆ ಧ್ಯಾನಿಸಿ ಕವಿತೆಯೊರೆದು
ಕತೆಯ ಮೊರೆದು ಎದೆಯಾಳದ ಮೌನದಲ್ಲೇ
ಹಾಡಿ ಪಾಡುವ ಗೊಡವ
ಕಾಣದೆಯೂ ಮತ್ತೆ ಮತ್ತೆ ಕಾಡುವ
ಕೈಗಳ ಮೇಲೆ ಪಕಳೆಗಳ ಮುನಿಸು
ಅದರೂ ತಾಗಿಸುವುದಿಲ್ಲ ಮುಳ್ಳ ಮೊನಚು

ಮನದನ್ನನ ಮೈತಳೆದ ಮುಗುದ ಮೊಗ್ಗಿನ
ನೆಪದಲ್ಲೇ ಗಡಿಬಿಡಿ ದೈನಿಕ
ಮತ್ತೆ ಹೊತ್ತು ಗೊತ್ತಿಲ್ಲದೆ ಆಸ್ಪತ್ರೆ ಸಹವಾಸ
ಬೈಗು ಬೆಳಗು ಹಗಲು ರಾತ್ರಿ ಎನ್ನದೇ
ದುಡಿವ ಹೂವಿಗೆ ಅರಳಲೂ ಹೊತ್ತಿಲ್ಲ!
ಹೊರಳಲೂ….!!

ಸುವಾಸಿಸುವ ಹೂವಿಗೆ ತಾನು ಹಾಗಲ್ಲ
ಹೀಗೆ ಎಂದು ಹೇಳುವುದೇ ಕಡು ಕಷ್ಟದ ಕಾಯಕ
ಬೆಳೆದ ಹೊಲದ ನೆಲದ ಬದುವಿನಲ್ಲೂ ನಳನಳಿಸಿ
ನಿನ್ನೆಗಳ ಸಾವರಿಸಿ ನಾಳೆಗಳ ಆದರಿಸಿದ
ಹೂವಿಗೆ ಇನ್ನೂ ಆದರಿಸಿಲ್ಲ ನೆರಳು!

ಕನಸುಗಳು ಇದ್ದರೂ ದುರಾಸೆಯೇನಿಲ್ಲ
ಬಂದಾನೋ ತಂದಾನೋ ನೆಮ್ಮದಿಯ
ತನ್ನಿನಿಯ ಅವನ ತಾನೇ ತಂದಾನ
ತನುವ ತುಂಬಿ ಮನವ ತುಂಬಿ
ಬಯಕೆಯೊಂದೇ…

ಮತ್ತೆ ಮತ್ತೆ ಕಾಡದಿರಲಿ ದುಂಬಿ


-ಡಾ. ಆನಂದ ಋಗ್ವೇದಿ, ದಾವಣಗೆರೆ
—–