ಗ್ರಾಪಂ ಚುನಾವಣೆ 8828 ಮತಗಟ್ಟೆ ಅಧಿಕಾರಿಗಳ ನೇಮಕ: ಜಿಲ್ಲಾಧಿಕಾರಿ ನಕುಲ್

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಅತ್ಯಂತ ಸುಸೂತ್ರವಾಗಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಈಗಾಗಲೇ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 5 ತಾಲೂಕುಗಳ 87 ಗ್ರಾಪಂಗಳ 818 ಮತಗಟ್ಟೆಗಳಿಗೆ 3600 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ.
ಮೊದಲನೇ ಹಂತದಲ್ಲಿ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಹೊಸಪೇಟೆ ಮತ್ತು ಕಂಪ್ಲಿ ತಾಲೂಕುಗಳ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಈ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಇದೇ ಡಿ.17ರಂದು ಆಯಾ ತಾಲೂಕಿನಲ್ಲಿಯೇ ತರಬೇತಿ ನೀಡಲಾಗುತ್ತದೆ. ಸಿರಗುಪ್ಪದಲ್ಲಿ ಮಾತ್ರ ಡಿ.18ರಂದು ತರಬೇತಿ ನೀಡಲಾಗುತ್ತದೆ. ಆಯಾ ತಾಲೂಕಿನಲ್ಲಿಯೇ ಕಾರ್ಯನಿರ್ವಹಿಸುತ್ತಿರುವವರನ್ನೇ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಎರಡನೇ ಹಂತದಲ್ಲಿ ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳಿಗೆ ಚುನಾವಣೆ ಜರುಗಲಿದ್ದು, ಈ ತಾಲೂಕುಗಳ 145 ಗ್ರಾಪಂಗಳಲ್ಲಿ 1255 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 5528 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳಿಗೆ ಇದೇ ಡಿ.23ರಂದು ಆಯಾ ತಾಲೂಕುಗಳಲ್ಲಿಯೇ ತರಬೇತಿ ನೀಡಲಾಗುತ್ತದೆ.
ಸಂಡೂರು,ಸಿರಗುಪ್ಪ,ಕೂಡ್ಲಿಗಿ ಮತ್ತು ಕಂಪ್ಲಿ ತಾಲೂಕುಗಳಿಗೆ ಕೆಲ ಪ್ರಮಾಣದಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಕೊರತೆ ಇರುವ ಹಿನ್ನೆಲೆಯಲ್ಲಿ ಸಂಡೂರು ತಾಲೂಕಿಗೆ-410 ಮತ್ತು ಸಿರಗುಪ್ಪ ತಾಲೂಕಿಗೆ 174 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಬಳ್ಳಾರಿ ತಾಲೂಕಿನಿಂದ ನಿಯೋಜಿಸಲಾಗಿದೆ. ಅದೇ ರೀತಿ ಕಂಪ್ಲಿ-105 ಮತ್ತು ಕೂಡ್ಲಿಗಿ-48 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಹೊಸಪೇಟೆ ತಾಲೂಕಿನಿಂದ ನಿಯೋಜಿಸಲಾಗಿದೆ. ಈ ಸದರಿ ತಾಲೂಕುಗಳಿಗೆ ನಿಯೋಜಿಸಲಾದ ಪಿಆರ್‍ಒ ಮತ್ತು ಎಪಿಆರ್‍ಒಗಳು ತಮಗೆ ನಿಯೋಜಿಸಲಾಗಿರುವ ತಾಲೂಕುಗಳಿಗೆ ತೆರಳಿ ತರಬೇತಿ ಪಡೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.