ಬಳ್ಳಾರಿ: ಜಿಲ್ಲೆಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ 3 ಭತ್ತ ಖರೀದಿ ನೋಂದಣಿ ಕೇಂದ್ರಗಳ ಜತೆಗೆ ಭತ್ತ ಬೆಳೆಯುವ ಪ್ರದೇಶಗಳ ವ್ಯಾಪ್ತಿಯ ರೈತಸಂಪರ್ಕ ಕೇಂದ್ರಗಳ ಮಟ್ಟದಲ್ಲಿ ಹೆಚ್ಚುವರಿಯಾಗಿ ಇನ್ನೂ 9 ಖರೀದಿ ನೋಂದಣಿ ಕೇಂದ್ರಗಳು ಹೆಚ್ಚಿಸುವಂತೆ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಸೂಚನೆ ನೀಡಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಮಾತನಾಡಿದರು.
ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ,ಸಿರಗುಪ್ಪ,ಕಂಪ್ಲಿಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು,ರೈತರು ಖರೀದಿ ಕೇಂದ್ರಗಳಿಗೆ ಬಂದು ಆನ್‍ಲೈನ್‍ನಲ್ಲಿಯೇ ನೋಂದಣಿ ಮಾಡಲು ತಿಳಿಸಲಾಗಿದೆ. ಹೆಚ್ಚುವರಿಯಾಗಿ 9 ರೈತ ಸಂಪರ್ಕ ಕೇಂದ್ರಗಳಲ್ಲಿ ಈ ನೋಂದಣಿ ಕೇಂದ್ರ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಅಧಿಕಾರಿಗಳು ತಕ್ಷಣ ಸಾಪ್ಟವೇರ್ ಅಳವಡಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಸರಕಾರವು ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‍ಗೆ 1868 ರೂ ಮತ್ತು ಗ್ರೇಡ್-ಎ ಭತ್ತಕ್ಕೆ 1888 ರೂ.ನಿಗದಿಪಡಿಸಲಾಗಿದೆ. ಈ ಮುಂಚೆ ಪ್ರತಿ ಎಕರೆಗೆ 16 ಕ್ವಿಂಟಾಲ್‍ಗಳಂತೆ ಗರಿಷ್ಠ 40 ಕ್ವಿಂಟಾಲ್ ಖರೀದಿಸಲು ತಿಳಿಸಲಾಗಿತ್ತು;ಈಗ ಅದನ್ನು ಬದಲಾಯಿಸಲಾಗಿದ್ದು ಪ್ರತಿ ಎಕರೆಗೆ 25 ಕ್ವಿಂಟಾಲ್‍ಗಳಂತೆ ಗರಿಷ್ಠ 75 ಕ್ವಿಂಟಾಲ್ ಭತ್ತ ಖರೀದಿಸಲು ಸರಕಾರ ಆದೇಶ ಹೊರಡಿಸಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್ ಅವರು ಜಿಲ್ಲಾಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ಈ ವಿಷಯ ಮಂಡಿಸಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಭತ್ತ ಖರೀದಿ ಹಾಗೂ ನೋಂದಣಿ ಕೇಂದ್ರಗಳು ಹೆಚ್ಚಾಗುವುದರಿಂದ ಹಾಗೂ ಭತ್ತ ಖರೀದಿ ಮಿತಿ ಹೆಚ್ಚಳವಾಗಿರುವುದರಿಂದ ಸಹಜವಾಗಿಯೇ ಹೆಚ್ಚಿನ ರೈತರು ಭತ್ತ ತರುವ ನಿರೀಕ್ಷೆ ಇದ್ದು, ಹಲ್ಲಿಂಗ್ ಮಾಡುವುದಕ್ಕಾಗಿ ರೈಸ್‍ಮಿಲ್‍ಗಳ ಸಂಖ್ಯೆಯೂ ಈ ಬಾರಿ ಹೆಚ್ಚಾಗಬೇಕು ಹಾಗೂ ಅವರ ಹಲ್ಲಿಂಗ್ ಮತ್ತು ಶೇಖರಣಾ ಸಾಮಥ್ರ್ಯ ಹಾಗೂ ಇನ್ನೀತರ ಅಂಶಗಳ ಕಡೆಗೂ ಅಧಿಕಾರಿಗಳು ಗಮನಹರಿಸಬೇಕು ಎಂದರು. ಜಿಲ್ಲೆಯಲ್ಲಿ ಕನಿಷ್ಠ 50 ಸಾವಿರ ರೈತರು ಭತ್ತ ಬೆಳೆಯುತ್ತಿದ್ದು,ಅದರಲ್ಲಿ ಶೇ.50ರಷ್ಟು ಅಂದರೇ 25 ಸಾವಿರದಷ್ಟಾದರೂ ಭತ್ತ ಖರೀದಿ ಮತ್ತು ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಆಗಬೇಕು. ಈ ಮೂಲಕ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಅಂದರೇ ಕ್ವಿಂಟಾಲ್‍ಗೆ 1300 ರೂ.ಗಳಂತೆ ಮಾರಾಟ ಮಾಡುವುದು ತಪ್ಪಬೇಕು ಮತ್ತು ರೈತರ ಹಿತಾಸಕ್ತಿ ಕಾಪಾಡಬೇಕು ಎಂದರು.
ಜೋಳ,ರಾಗಿ ಖರೀದಿ ಕೇಂದ್ರಗಳ ಕುರಿತು ಸಹ ಅಗತ್ಯ ಮಾಹಿತಿ ಪಡೆದ ಅವರು ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ನಂತರ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಎಪಿಎಂಸಿ ಆವರಣದಲ್ಲಿ ವಿವಿಧೆಡೆ ತೆರಳಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಎಪಿಎಂಸಿ ಕಾರ್ಯದರ್ಶಿ ಮೋಹನ್, ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್,ಎಪಿಎಂಸಿ ಸಮಿತಿ ಸದಸ್ಯರು ಹಾಗೂ ಇನ್ನೀತರ ಅಧಿಕಾರಿಗಳು ಇದ್ದರು.
*****