ನಾಟಕಗಳು ಮನರಂಜನೆ ಜತೆ ಮನಸ್ಸನ್ನು ಪರಿವರ್ತಿಸಬಲ್ಲವು -ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿ: ರಂಗಭೂಮಿಗೆ ತನ್ನದೇ ಆದ ಸಾಮಾಜಿಕ ಜವಾಬ್ದಾರಿಯಿದೆ. ಮೊದಲು ಪ್ರತಿ ಹಳ್ಳಿಗಳಲ್ಲೂ ಹೆಚ್ಚು ನಾಟಕಗಳು ಪ್ರದರ್ಶನವಾಗುತ್ತಿದ್ದವು.ನಾಟಕಗಳಿಗೆ ಸಾಮಾನ್ಯರ ಮನಸನ್ನು ಪರಿವರ್ತಿಸುವ ಬಹು ದೊಡ್ಡ ಶಕ್ತಿಯಿದೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ನಗರದ ರಾಘವ ಕಲಾಮಂದಿರದಲ್ಲಿ ಶನಿವಾರ ಸಂಜೆ ಆಲಾಪ್ ಸಂಗೀತ ಕಲಾ ಟ್ರಸ್ಟ್, ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಗಾಯನ ಹಾಗೂ ಬಾಡಿದ ಹೂಗಳು ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಳ್ಳಾರಿ ರಾಘವರು ರಂಗಭೂಮಿಯ ಮೂಲಕವೇ ದೇಶ ವಿದೇಶಗಳಲ್ಲಿ ಪ್ರಖ್ಯಾತ ರಾಗಿ ಸಮಾಜದ ಏಳ್ಗೆಗೆ ನಾಟಕಗಳ ಮೂಲಕ ಶ್ರಮಿಸಿದರು ಎಂದು ತಿಳಿಸಿದರು.
ಬಳ್ಳಾರಿ ಹಿಂದಿನಿಂದಲೂ ಕಲೆಗಳಿಗೆ ತವರೂರು.ಎಲ್ಲ ರಂಗ ಕಲೆಗಳು ಇಲ್ಲಿವೆ. ವಿಜಯನಗರದ ಅರಸರು ಸಾಹಿತ್ಯ, ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದರು ರಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ ಮಾತನಾಡಿ, ಕಲೆಯು ಯಾರೊಬ್ಬರ ಸ್ವತ್ತಲ್ಲ. ಪ್ರತಿಭಾವಂತ ಕಲಾವಿದರು ನಮ್ಮ ನಾಡಿನ ಆಸ್ತಿಯಂತೆ ಅವರ ಕಲೆಗೆ ಸೂಕ್ತ ಪ್ರೋತ್ಸಾಹ ನೀಡಿ ಸಮಾಜ ಗೌರವಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಕೋವಿಡ್ ಕಾರಣದಿಂದ ಇಷ್ಟು ದಿನಗಳ ಕಾಲ ಕಲಾವಿದರು ಮಂಕಾಗಿದ್ದರು.ಮತ್ತೆ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿವೆ.ಜಡವಾದ ಸಮಾಜಕ್ಕೆ ಸಾಹಿತ್ಯ ಕಲೆ ಮಾತ್ರ ಚೈತನ್ಯ ತುಂಬಲು ಸಾಧ್ಯ.ಸುಸ್ಥಿರ ಆರೋಗ್ಯಕ್ಕಾಗಿ ಸಾಂಸ್ಕೃತಿಕವಾಗಿ ಜನ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅಗತ್ಯತೆಯಿದೆ ಎಂದರು.
ಡಾ.ಸುಭದ್ರಮ್ಮ ಮನ್ಸೂರ್, ಕೋಗಳಿ ಪೊಂಪಣ್ಣ,ಬಸವರಾಜ ನಾಡಂಗ ರಂತಹ ಪ್ರತಿಭಾನ್ವಿತ ಕಲಾವಿದರನ್ನು ಕಳೆದುಕೊಂಡು ಜಿಲ್ಲೆಯ ರಂಗಭೂಮಿ ಬಡವಾದಂತಾಗಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದ ರಾಘವ ಕಲಾ ಮಂದಿರದ ಗೌರವಾಧ್ಯಕ್ಷ ಕೆ ಚನ್ನಪ್ಪ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕಪ್ಪಗಲ್ಲು ಪ್ರಭುದೇವ, ಬಳ್ಳಾರಿ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಗೌರವಾಧ್ಯಕ್ಷರಾದ ಸಿ ಸಿದ್ದನಗೌಡ, ಬಳ್ಳಾರಿ,ವಂದನಾ ವಿದ್ಯಾಸಂಸ್ಥೆ ಸಂಸ್ಥಾಪಕರು ಕೆ ಬಿ ಈಶ್ವರ, ಬಳ್ಳಾರಿ ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು.
ಟ್ರಸ್ಟ್ ವತಿಯಿಂದ ಡಾಕ್ಟರ್ ಅಣ್ಣಾಜಿ ಕೃಷ್ಣಾರೆಡ್ಡಿ ಅವರಿಗೆ ರಂಗ ಸೌರಭ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮ್ಯಾಜಿಕ್ ಕಲಾವಿದರಾದ ಕು. ಸಂದೀಪ್ ಎಂ.ಪಿ ಇವರಿಗೆ ರಮೇಶ್ ಗೌಡ ಪಾಟೀಲ್ ಕಲಾ ಟ್ರಸ್ಟ್ ವತಿಯಿಂದ ಸಹಾಯ ಧನ ನೀಡಿ ಸನ್ಮಾನಿಸಲಾಯಿತು.
ಕೊರವರ ಜಡೆಪ್ಪ ಮತ್ತು ತಂಡದಿಂದ ಜಾನಪದ ಗಾಯನ ಪ್ರದರ್ಶನ ಜರುಗಿತು.
ನಾಟಕ: ಲಾಲ್ ರೆಡ್ಡಿ ನಿರ್ದೇಶನದಲ್ಲಿ ಬಾಡಿದ ಹೂವುಗಳು ನಾಟಕ ಪ್ರದರ್ಶಿಸಲಾಯಿತು.
ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಕೆ ಜಿ ಆಂಜನೇಯ ನಿರ್ವಹಿಸಿದರು.