ಬಳ್ಳಾರಿ: ಜಿಲ್ಲೆಯಲ್ಲಿ ಮಂಗಳವಾರ ನಡೆದ ಮೊದಲ ಹಂತದ ಗ್ರಾಪಂ ಚುನಾವಣೆಯ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆಯಿತು.
ಜಿಲ್ಲೆಯ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಹೊಸಪೇಟೆ ಮತ್ತು ಕಂಪ್ಲಿಯ ಒಟ್ಟು 5 ತಾಲೂಕುಗಳ 85 ಗ್ರಾಪಂಗಳ 701 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
ಚಿಹ್ನೆ ಮುದ್ರಣದಲ್ಲಿ ಯಡವಟ್ಟಿನ ಕಾರಣದಿಂದ ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ತೊಲಮಾಮಡಿ ಮತಗಟ್ಟೆಯೊಂದರಲ್ಲಿ ಮತಗಟ್ಟೆ ಸ್ಥಗಿತವಾಗಿರುವುದು ಬಿಟ್ಟರೆ ಉಳಿದೆಲ್ಲ ಕಡೆ ಮತದಾನ ಅತ್ಯಂತ ಶಾಂತಿಯುತವಾಗಿ ನಡೆದಿದೆ.
ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಮಾಡುವುದಕ್ಕೆ ಜನರು ಅತ್ಯಂತ ಉತ್ಸಾಹದಿಂದ ಮತಗಟ್ಟೆಯತ್ತ ಆಗಮಿಸಿ ಸರತಿ ಸಾಲಿನಲ್ಲಿ ನಿಂತುಕೊಂಡು ಮತಚಲಾಯಿಸುತ್ತಿರುವುದು ಕಂಡುಬಂದಿತು.
3 ದಶಕಗಳ ಬಳಿಕ ಚುನಾವಣೆ ನಡೆಯುತ್ತಿರುವ ಕಪಗಲ್ಲು ಗ್ರಾಮದಲ್ಲಿಯೂ ಸಹ ಮತದಾರರು ಅತ್ಯಂತ ಉತ್ಸಾಹದಿಂದ ಮತದಾನ ಮಾಡುತ್ತಿರುವುದು ಕಂಡುಬಂದಿತು.
ಸಂಗನಕಲ್ಲು ಗ್ರಾಮದಲ್ಲಿ ಲಕ್ಷ್ಮಮ್ಮ ಎನ್ನುವ 99 ವರ್ಷದ ಅಜ್ಜಿ ಮಹಿಳೆಯೊಬ್ಬರ ನೆರವಿನೊಂದಿಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಚಲಾಯಿಸಿ ಅತ್ಯಂತ ಖುಷಿಯಿಂದ ತನ್ನ ಚುನಾವಣಾ ಗುರುತಿನ ಚೀಟಿ ಹಾಗೂ ಕೈಬೆರಳಿಗೆ ಹಾಕಿದ ಶಾಯಿ ತೋರಿಸುತ್ತ ನಗುಮೋಗದಿಂದ ಮತಗಟ್ಟೆಯಿಂದ ಮನೆಯತ್ತ ನಡೆದಿದ್ದುದು ಗಮನಸೆಳೆಯಿತು.
ಬಳ್ಳಾರಿ ಜಿಲ್ಲೆಯಲ್ಲಿ ಮಧ್ಯಾಹ್ನ 3ಕ್ಕೆ ಅನ್ವಯವಾಗುವಂತೆ ಜಿಲ್ಲಾಡಳಿತ ನೀಡಿದ ವರದಿ ಅನುಸಾರ ಶೇ.69.45ರಷ್ಟು ಮತದಾನವಾಗಿದೆ.
ಈಗಾಗಲೇ 331 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಮಂಗಳವಾರ 1372 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅದೃಷ್ಟಪರೀಕ್ಷೆಗಿಳಿದಿದ್ದ 3288 ಅಭ್ಯರ್ಥಿಗಳ ಭವಿಷ್ಯ ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.30ರಂದು ಯಾರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ ಎಂಬುದು ಸ್ಪಷ್ಟವಾಗಲಿದೆ.
ಬಳ್ಳಾರಿ ತಾಲೂಕಿನ 25 ಗ್ರಾಪಂಗಳ 240 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಈ ತಾಲೂಕಿನಲ್ಲಿ 73 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು,449 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1098 ಜನರು ಕಣದಲ್ಲಿದ್ದು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕುರುಗೋಡು ತಾಲೂಕಿನಲ್ಲಿ 12 ಗ್ರಾಪಂಗಳ ಪೈಕಿ 11 ಗ್ರಾಪಂಗಳ 81 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಗಾಗಲೇ 68 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು, 145 ಸದಸ್ಯ ಸ್ಥಾನಗಳಿಗೆ 337 ಅಭ್ಯರ್ಥಿಗಳು ಕಣದಲ್ಲಿದ್ದು,ಅದೃಷ್ಟಲಕ್ಷ್ಮೀ ಮತಪೆಟ್ಟಿಗೆಯಲ್ಲಿದ್ದು,ಯಾರಿಗೊಲಿಯಲಿದ್ದಾಳೆ ಕಾದುನೋಡಬೇಕಿದೆ.
ಸಿರಗುಪ್ಪ ತಾಲೂಕಿನ 27 ಗ್ರಾಪಂಗಳ ಪೈಕಿ 26 ಗ್ರಾಮಗಳ 173 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಇನ್ನೂ 46 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆದಿಲ್ಲ. ಈಗಾಗಲೇ 94 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 361 ಸದಸ್ಯ ಸ್ಥಾನಗಳಿಗೆ 763 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹೊಸಪೇಟೆ ತಾಲೂಕಿನ 13 ಗ್ರಾಪಂಗಳ 114 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಇನ್ನೂ 11 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ನಡೆದಿಲ್ಲ.ಈಗಾಗಲೇ 41 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 233 ಸದಸ್ಯ ಸ್ಥಾನಗಳಿಗೆ 653 ಅಭ್ಯರ್ಥಿಗಳು ಕಣದಲ್ಲಿದ್ದು,ತಮ್ಮ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಕಂಪ್ಲಿ ತಾಲೂಕಿನ 10 ಗ್ರಾಪಂಗಳ 93 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಿತು. 29 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂಳಿದ 184 ಸದಸ್ಯ ಸ್ಥಾನಗಳಿಗೆ 437 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರ ಯಾರಿಗೆ ಮಣೆಹಾಕಿದ್ದಾನೋ ಕಾದುನೋಡಬೇಕಿದೆ.
ಮೊದಲ ಹಂತದ ಚುನಾವಣಾ ಪ್ರಕ್ರಿಯೆಗೆ 3600 ಮತಗಟ್ಟೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಜಿಲ್ಲಾಡಳಿತ ನಿಯುಕ್ತಿಗೊಳಿಸಿದೆ.
ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಮತಗಟ್ಟೆಗೆ ಮತದಾನ ಮಾಡಲು ಆಗಮಿಸುವ ಪ್ರತಿಯೊಬ್ಬರ ಕೈಗೂ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಿ ಒಳಬಿಡಲಾಗುತ್ತಿತ್ತು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆಶಾ ಕಾರ್ಯಕರ್ತೆಯರು ಸೂಚನೆ ನೀಡುತ್ತಿದ್ದರು.
(ಚಿತ್ರಗಳು:ಶ್ರೀಧರ ಕಾವಲಿ)
*****