ಬಳ್ಳಾರಿ: ನಗರದ ಡಾ.ರಾಜಕುಮಾರ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿ ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯ ಬಯಲು ರಂಗಮಂದಿರಕ್ಕೆ ಹೆಸರಾಂತ ರಂಗ ಕಲಾವಿದೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್
ಅವರ ಹೆಸರನ್ನು ನಾಮಕರಣ ಮಾಡಲು ಸರಕಾರ ಒಪ್ಪಿಗೆ ನೀಡಿದೆ.
ಈ ಕುರಿತು ಇಲಾಖೆಯ ಅಧೀನ ಕಾರ್ಯದರ್ಶಿ ಹೆಚ್.ಕೆ.ಸುರೇಶ್ ಬಾಬು ಆದೇಶ
ಹೊರಡಿಸಿದ್ದಾರೆ.
ಕನ್ನಡ ರಂಗಭೂಮಿ ಹಾಗೂ ಸಂಗೀತ ಕ್ಷೇತ್ರಕ್ಕೆ ಅಭೂತಪೂರ್ವ ಸೇವೆ ಸಲ್ಲಿಸಿದ, ಗಾನ ಕೋಗಿಲೆ
ಎಂದೆ ಖ್ಯಾತರಾಗಿದ್ದ ಡಾ.ಸುಭದ್ರಮ್ಮ ಮನ್ಸೂರು ಅವರ ಹೆಸರಿಡುವಂತೆ ಜಿಲ್ಲೆಯ ಕಲಾವಿದರು, ಸಾಂಸ್ಕೃತಿಕ ಲೋಕದ ಗಣ್ಯರು ಒತ್ತಾಯಿಸಿದ್ದರು.
ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು
ಸಂಸ್ಕೃತಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದರು. ಅದಕ್ಕೆ ಈಗ ಸಮ್ಮತಿ ದೊರೆತಿದೆ.
ಈ ಹಿನ್ನಲೆಯಲ್ಲಿ ಶುಕ್ರವಾರ ರಂಗ ಕಲಾವಿದರ ಪರವಾಗಿ ರಂಗ ನಟ, ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್ ಹಾಗೂ ಇಲಾಖೆ ಪರವಾಗಿ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರು ಶಾಸಕರನ್ನು ಭೇಟಿ
ಮಾಡಿ ಅಭಿನಂದನೆ ಸಲ್ಲಿಸಿದರು.
ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಶಾಸಕ ರೆಡ್ಡಿ ಅವರು, ಶೀಘ್ರದಲ್ಲೇ ಬಯಲು ರಂಗಮಂದಿರದಲ್ಲೇ ಕಾರ್ಯಕ್ರಮ ಆಯೋಜಿಸಿ
ಬಯಲು ಮಂದಿರಕ್ಕೆ ನಾಮಕರಣ ಮಾಡುವ ಜೊತೆಗೆ ಈ ಪರಿಸರದಲ್ಲಿ ಡಾ. ಸುಭದ್ರಮ್ಮ ಅವರ ಪುತ್ಥಳಿ ಸ್ಥಾಪಿಸಲು ಸಹ ಕ್ರಮ
ಕೈಗೊಳ್ಳಲಾಗುವುದು ಎಂದು ಹೇಳಿದರು.
*****