ಯು ಪಿ ಎಸ್ ಸಿ ಪರೀಕ್ಷಾ ಕಾರ್ಯಾಗಾರ: ಡಿಎಂಎಫ್ ನಿಧಿಯಿಂದ ಪ್ರತಿ ವರ್ಷ 150 ವಿದ್ಯಾರ್ಥಿಗಳಿಗೆ ಉಚಿತ ಐಎಎಸ್ ತರಬೇತಿ: ಡಿಸಿ ನಕುಲ್

ಬಳ್ಳಾರಿ: ಬಡತನ, ಕೀಳರಿಮೆಯನ್ನು ಮೆಟ್ಟನಿಲ್ಲುವ ಮೂಲಕ ಶ್ರದ್ಧೆ ಮತ್ತು ಸತತ ಪರಿಶ್ರಮದಿಂದ ಮುಂದೆ ಸಾಗಿದರೆ ಯಶಸ್ಸು ನಿಮ್ಮದಾಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪರ್ಧಾಳುಗಳಿಗೆ ಸಲಹೆ ನೀಡಿದರು.
ಜಿಲ್ಲಾ ಖನಿಜ ನಿಧಿ ಯೋಜನೆಯಡಿಯಲ್ಲಿ ಜಿಲ್ಲಾಡಳಿತವು ನಗರದ ವಿಮ್ಸ್ ನಿರ್ದೇಶಕರ ಕಚೇರಿಯ ಹತ್ತಿರವಿರುವ ಶಿಕ್ಷಕರ ಭವನನದಲ್ಲಿ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡುವುದಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರದಲ್ಲಿ ಅವರು‌ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎನ್ನುವ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಒಂದು ಉತ್ತಮ ಅವಕಾಶವನ್ನು ಬಳ್ಳಾರಿ ಜಿಲ್ಲಾಡಳಿತ ಕಲ್ಪಿಸಲಾಗಿದೆ. ಇದನ್ನು ಎಲ್ಲರು ಉಪಯೋಗಿಸಿಕೊಳ್ಳಿ ಮತ್ತು
ಸತತ ಪ್ರಯತ್ನ ಮತ್ತು ಮಾರ್ಗದರ್ಶನ ಸರಿಯಾಗಿದ್ದರೆ ಸಾಧನೆ ಮಾಡುವುದು ಸುಲಭವಾಗುತ್ತದೆ ಎಂದರು.
ಜಿಲ್ಲಾ ಖನಿಜ ನಿಧಿಯನ್ನು ಬಳಸಿಕೊಂಡು ಪ್ರತಿ ವರ್ಷ 150 ಜನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ಇದರ ಮೊದಲ ಭಾಗವಾಗಿ ಜ.3ರಂದು ಸರಳಾದೇವಿ ಕಾಲೇಜಿನಲ್ಲಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಅದರಲ್ಲಿ ಉತ್ತಮ ಅಂಕ ಪಡೆದ 150 ಜನರನ್ನು ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಲಾಗುವುದು. ಉಚಿತ ತರಬೇತಿಯ ತರಗತಿಗಳು ಜನವರಿ 15ರಿಂದಲೇ ಶುರುವಾಗಬಹುದು ಎಂದರು.
ತರಗತಿಗಳಲ್ಲಿ ಹಲವು ವಿಷಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ನಗರ ಕೇಂದ್ರ ಗ್ರಂಥಾಲಯದಲ್ಲಿ ಹೊಸದಾಗಿ ಪ್ರಾರಂಭ ಮಾಡಿರುವ ಸ್ಟಡಿ ಸೆಂಟರ್‌ನಲ್ಲಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ನಕುಲ್ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ, ನಾವು ಗ್ರಾಮೀಣ ಭಾಗದವರು, ನಮಗೆ ಇಂಗ್ಲೀಷ್ ಮಾತಾಡೋಕೆ ಬರಲ್ಲ, ಇನ್ನು ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ ಎನ್ನುವ ನಿರುತ್ಸಾಹವನ್ನು ನಿಮ್ಮ ತಲೆಯಿಂದ ತೆಗೆದುಹಾಕಿ, ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಇತರರಿಗೆ ಮಾದರಿಯಾಗಬೇಕು ಎಂದುಕೊಂಡವರು ನಿರಂತರವಾಗಿ ಶ್ರಮವಹಿಸಿ, ಪ್ರತಿಕ್ಷಣ ನಿಮ್ಮ ಆ ಕನಸು ನನಸಾಗಲು ಕಷ್ಟಪಡಿ ಆಗ ನಿಮ್ಮ ಗೆಲುವು ನಿಶ್ಚಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ನಿಮ್ಮ ತಂದೆ- ತಾಯಿ ಜಮೀನಿಗಳಲ್ಲಿ ಯಾವುದೇ ಮಳೆ, ಬಿಸಿಲು, ಚಳಿ ಎನ್ನದೆ ವರ್ಷಪೂರ್ತಿ ಕೆಲಸ ಮಾಡುತ್ತಾರೆ. ಅವರಿಗೆ ವಿಶ್ರಾಂತಿ ಎನ್ನುವುದೇ ಇಲ್ಲ. ಅವರೇ ನಿಮ್ಮ ಕನಸಿಗೆ ನಿಜವಾದ ಹೀರೋಗಳು. ನೀವು ಸಹ ನಿಮ್ಮ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ, ಶಿಸ್ತು ಮತ್ತು ಕಠಿಣ ಶ್ರಮವನ್ನು ಎಂದಿಗೂ ಮರೆಯದಿರಿ ಎಂದರು.
ಜಿಪಂ ಸಿಇಓ ನಂದಿನಿ ಕೆ.ಆರ್ ಅವರು ಮಾತನಾಡಿ, ನೀವು ಯಾವುದೇ ಒಂದು ವಿಶೇಷ ಕೆಲಸ ಮಾಡಲು ಹೊರಟಾಗ ನಿಮ್ಮ ಸುತ್ತಲಿನ ಜನ ಆ ನಿಮ್ಮ ಕೆಲಸ ಬಗ್ಗೆ ಮಾತನಾಡುತ್ತಾರೆ, ನಂತರ ನಿಮ್ಮನ್ನು ನಗೆ ಪಾಟಲು ಮಾಡುತ್ತಾರೆ, ನೀವು ಆ ಕೆಲಸದಲ್ಲಿ ಯಶಸ್ಸು ಗಳಿಸಿದ ನಂತರ ಅದೇ ಜನರು ನಿಮ್ಮನ್ನು ಸನ್ಮಾನ ಮಾಡುತ್ತಾರೆ. ಮೊದಲು ಎರಡು ಕಷ್ಟಗಳನ್ನು ಅನುಭವಿಸಿದರೆ ಮಾತ್ರ ಸನ್ಮಾನ ಸ್ವೀಕರಿಸಲು ನೀವು ಅರ್ಹರಾಗುತ್ತೀರಿ. ಅದಕ್ಕೂ ಮುನ್ನ ನಿಮ್ಮ ತಲೆಯಲ್ಲಿರುವ ತಪ್ಪು ಕಲ್ಪನೆಯನ್ನು ದೂರ ಮಾಡಿ, ಪೂರ್ವಗ್ರಹ ಪೀಡಿತರಾಗಬೇಡಿ ಎಂದು ತಿಳಿಸಿದರು.
ಪ್ರತಿಯೊಬ್ಬರಲ್ಲಿ ಒಂದೊಂದು ವಿಶೇಷತೆಗಳು ಇರುತ್ತವೆ; ಅವುಗಳ ಬಗ್ಗೆ ಗಮನವಿರಲಿ. ನಿಮ್ಮ ಮೇಲೆ ನಿಮಗೆ ವಿಶ್ವಾಸ ಮತ್ತು ನಂಬಿಕೆಗಳಿರಲಿ. ಮೊದಲು ನೀವು ಸಧೃಢರಾಗಿ ಯಾವುದೇ ಅಳುಕಿಲ್ಲದೆ ಮುನ್ನಡೆಯಿರಿ ಎಂದ ಅವರು ತಮ್ಮ ಸ್ಪರ್ಧಾತ್ಮಕ ಅನುಭವದ ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಂಡರು.
ಇನ್‌ಸೈಟ್ ಆನ್‌ ಇಂಡಿಯಾದ ಸಂಸ್ಥಾಪಕರಾದ ವಿನಯ್ ಅವರು ಮಾತನಾಡಿ,ನಿಮ್ಮಲ್ಲಿ ಹಲವಾರು ಕನಸುಗಳು ಇರಬಹುದು ಅವುಗಳಿಗೆ ನೀರೆರೆಯುವ ಕೆಲಸ ನಮ್ಮ ಈ ಇನ್‌ಸೈಟ್ ಅಕಾಡೆಮಿ ಮಾಡುತ್ತದೆ. ಐಎಎಸ್ ಆಗಬೇಕು ಎನ್ನುವ ಕನಸು ನಿಮ್ಮ ಮನದಲ್ಲಿ ಮೂಡಬೇಕು, ಅಂತಹ ಕನಸು ಕಾಣಲು ಯಾವುದೇ ಭಯ ಬೇಡ. ನಾವು ನಿಮ್ಮ ಕನಸುಗಳು ನನಸಾಗಲು ಒಂದು ಅವಕಾಶ ಕೊಡಬಹುದು ಆದರೆ ಯಶಸ್ಸು ನಿಮ್ಮದಾಗಲು ನಿಮ್ಮ ಕಠಿಣ ಪರಿಶ್ರಮ, ಶಿಸ್ತು, ಸಮಯ ಪಾಲನೆ ಅತೀ ಮುಖ್ಯ ಎಂದರು.
ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು ಅದನ್ನು ಉಪಯೋಗಿಸಿಕೊಳ್ಳಿ. ಮುಂದಿನ ದಿನಗಳಲ್ಲಿ ಡೆಲ್ಲಿ, ಬೆಂಗಳೂರು, ಹೈದರಾಬಾದ್, ಧಾರವಾಡಗಳಂತೆ ಬಳ್ಳಾರಿ ಜಿಲ್ಲೆಯು ಸಹ ಇನ್ನು 4ರಿಂದ 5 ವರ್ಷಗಳಲ್ಲಿ ಒಂದು ಉತ್ತಮ ಸ್ಪರ್ಧಾತ್ಮಕ ಕೇಂದ್ರವಾಗಿ ಮಾರ್ಪಾಡಾಗಲಿ ಎಂದು ಹೇಳಿದರು.
ಇನ್‌ಸೈಟ್ ಆನ್‌ಇಂಡಿಯಾದ ಪ್ರದೀಪ್ ಅವರು ಮಾತನಾಡಿ, ಐಎಎಸ್ ಎನ್ನುವುದು ಕಬ್ಬಿಣದ ಕಡಲೆ ಅದನ್ನು ಪಾಸ್ ಮಾಡುವುದು ತುಂಬಾ ಕಷ್ಟ ಎನ್ನುವು ನಿಮ್ಮ ಅನುಮಾನ, ಸಂದೇಹಗಳನ್ನ ನಿಮ್ಮ ಮನಸ್ಸಿನಿಂದ ದೂರ ಮಾಡಿ. ನಿಮ್ಮಲ್ಲಿ ತಾಳ್ಮೆ, ಏನಾದರು ಸಾಧನೆ ಮಾಡಬೇಕು ಎನ್ನುವ ತುಡಿತ ಇದ್ದರೆ ಯಶಸ್ಸು ನಿಮಗೆ ಒಲಿಯಲಿದೆ ಎಂದರು.
ಗ್ರಾಮೀಣ ಭಾಗದವರು ನಗರದಲ್ಲಿ ಅಭ್ಯಾಸ ಮಾಡುವವರಿಗೆ ಸ್ಪರ್ಧೆ ಮಾಡಲು ಆಗುವುದಿಲ್ಲ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಡಿ,ಶ್ರದ್ಧೆ,ಆಸಕ್ತಿ,ಶಿಸ್ತು ಎಲ್ಲಿದ್ರು ಕಲಿಯಬಹುದು. ಇದರ ಜತಗೆ ಸತತ ಅಭ್ಯಾಸ, ಕಠಿಣ ಪರಿಶ್ರಮ, ಒಂದು ನಿಶ್ಚಯವಾದ ಗುರಿ, ಮಾರ್ಗದರ್ಶನ ನೀಡಲು ಒಬ್ಬ ಒಳ್ಳೆಯ ಗುರು ಇದ್ದರೆ ಗೆಲುವು ನಿಮ್ಮದಾಗಲಿದೆ ಎಂದರು.
ಈ ಸಂದರ್ಭದಲ್ಲಿ ಇನ್‌ಸೈಟ್ ಇಂಡಿಯಾದ ಶಮಂತ್, ಐಎಎಸ್ ಅಧಿಕಾರಿ ರಾಹುಲ್ ಸಂಕನೂರು ಅವರು ಮಾತನಾಡಿದರು.
ಸರಳಾ ದೇವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೇಮಣ್ಣ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಇಸ್ಮಾಯಿಲ್ ಮಕಾಂದರ್, ಡಾ.ಟಿ.ವೀರಭದ್ರಪ್ಪ, ಡಾ.ಕೆ.ಬಸಪ್ಪ ಹಾಗೂ ಇತರರು ಇದ್ದರು.
ಊಹೆಗೂ ಮೀರಿ ನೂರಾರು ಸಂಖ್ಯೆಯಲ್ಲಿ ಯುವ ಸಮೂಹ ಹರಿದು ಬಂದ ಕಾರಣ ಸಭಾಂಗಣ ತುಂಬಿ ತುಳುಕುತ್ತಿತ್ತು.
ಸಭೆಯಲ್ಲಿ ವಿದ್ಯಾರ್ಥಿಗಳು ಕೂಡಲು ಆಸನಗಳಿಲ್ಲದೆ ನಿಂತ ಸ್ಥಳದಿಂದಲೇ ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ಆಲಿಸಿದ್ದು ವಿಶೇಷವಾಗಿತ್ತು

*****