ಬಳ್ಳಾರಿ:ಸಾರ್ವಜನಿಕರ ಸೇವೆ ಮಾಡಲು ಅವಕಾಶ ದೊರೆತಿರುವುದೇ ಒಂದು ಅದೃಷ್ಟ;ಅದನ್ನು ಸಮಾಜದ ಒಳಿತಿಗೆ, ಸಾಮಾನ್ಯ ಜನರ ಶ್ರೇಯಸ್ಸಿಗಾಗಿ ಬಳಕೆ ಮಾಡಿ ಎಂದು ಭ್ರಷ್ಟಾಚಾರ ನಿಗ್ರಹದಳದ ಬಳ್ಳಾರಿ ವಲಯದ ಎಸ್ಪಿ ಗುರುನಾಥ್ ಮತ್ತೂರು ಅವರು ಹೇಳಿದರು.
ನಗರದ ಬುಡಾ ಕಚೇರಿಯ ಹಿಂಬಾಗದಲ್ಲಿರುವ ಎಂಜನಿಯರ್ಸ್ ಅಸೋಸಿಯೇಶನ್ ಫಂಕ್ಷನ್ ಹಾಲ್‍ನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಭ್ರಷ್ಟಾಚಾರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮಗೆ ದೊರೆತ ಹುದ್ದೆ ಮತ್ತು ಹಣ ಯಾವುದೂ ಶಾಶ್ವತವಲ್ಲ ಒಳ್ಳೆಯ ಕೆಲಸ ಮಾಡಿ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿ ನಿಮಗೂ ಒಂದು ನೆಮ್ಮದಿ ದೊರೆಯುತ್ತದೆ. ಮನುಷ್ಯನಿಗೆ ಆಲೋಚಿಸುವ ಶಕ್ತಿಯಿದೆ;ವಿವೇಚನೆಯಿಂದ ಕೆಲಸ ಮಾಡಿ ಎಂದರು.
ಡಿವೈಎಸ್ಪಿ ಚಂದ್ರಕಾಂತ್ ಪೂಜಾರಿ ಅವರು ಮಾತನಾಡಿ, ಯಾವುದೇ ಲಾಭ ಪಡೆಯದೆ ಸಾರ್ವಜನಿಕರ ಕೆಲಸವನ್ನು ಮಾಡಿಕೊಡಿ, ವೈಯಕ್ತಿಕವಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ಪಣ ತೊಡಿ ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭಿಯಂತರ ಆರ್.ಎಸ್.ಮೋಹನ್ ಕುಮಾರ್, ಎಸಿಬಿ ಇನ್ಸಪೆಕ್ಟರ್ ಪ್ರಭುಲಿಂಗಯ್ಯ ಹಿರೇಮಠ ಅವರು ಮಾತನಾಡಿದರು.
ಈ ಸಮಯದಲ್ಲಿ ಜೆಸ್ಕಾಂ ಸಿಬ್ಬಂದಿ ಹಾಗೂ ಇತರರು ಇದ್ದರು..