ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಿಷೇಧ: ಜಿಲ್ಲಾಧಿಕಾರಿ ನಕುಲ್

ಬಳ್ಳಾರಿ: ಡಿ.31ರಿಂದ ಜನೆವರಿ 2ರವರೆಗೆ ರಂದು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಪಾರ್ಕ್‍ಗಳಲ್ಲಿ, ಮೈದಾನಗಳಲ್ಲಿ ಹಾಗೂ ಜನರು ಸೇರುವಂತಹ ಪ್ರದೇಶಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಆಚರಿಸುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಯನ್ನು ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ, ಹೊಟೇಲ್, ಬಾರ್, ಪಬ್, ರೆಸ್ಟೋರೆಂಟ್ ಗಳ ಕನಿಷ್ಠ ಪ್ರಮಾಣದ ಜನರು ಸೇರಿ ಡಿ.31ರಂದು ರಾತ್ರಿ 12ಗಂಟೆಗೆ ಸೀಮಿತಗೊಂಡಂತೆ ಎಲ್ಲ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಆಚರಿಸಲು ಸೂಚಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ವಿಶೇಷ ಡಿಜೆ-ಡಾನ್ಸ್ ಕಾರ್ಯಕ್ರಮಗಳನ್ನು, ವಿಶೇಷ ಪಾರ್ಟಿ, ಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯ ಹೋಮ್ ಸ್ಟೇ, ರೆಸಾರ್ಟ್, ಹೊಟೇಲ್, ಫಾರಂ ಹೌಸ್, ಪ್ರವಾಸಿ ತಾಣಗಳು, ಶಾಪಿಂಗ್ ಮಾಲ್‍ಗಳಲ್ಲಿ ಎಲ್ಲ ಕೋವಿಡ್-19 ಮುಂಜಾಗ್ರತ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿರುವ ಅವರು 65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿದೆ.
ಪ್ರಾರ್ಥನಾ ಮಂದಿರ,ದೇವಸ್ಥಾನ,ಚರ್ಚ್,ಮಸೀದಿ ಇತ್ಯಾದಿ ಸ್ಥಳಗಳಲ್ಲಿ ಆಚರಣೆ ಮಾಡಬಯಸುವವರಿಗೂ ಸಹ ಡಿ.31ರಂದು ಮಧ್ಯರಾತ್ರಿ 12ರವರೆಗೆ ಕಡಿಮೆ ಪ್ರಮಾಣದ ಜನರು ಸೇರಿಕೊಂಡು ಕೋವಿಡ್ ಸೊಂಕು ಹರಡದಂತೆ ಎಲ್ಲ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವುದು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೋಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಾದ್ಯಾಂತ ಕೋವಿಡ್-19 ಸಾಂಕ್ರಾಮಿಕ ರೋಗವು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು, ಪ್ರಸ್ತುತ ಬ್ರಿಟನ್ ದೇಶದಿಂದ ಬರುವ ಪ್ರಯಾಣಿಕರನ್ನು ರಾಜ್ಯದ ಜಿಲ್ಲೆಗಳಲ್ಲಿ ಪ್ರವೇಶಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಕೊವೀಡ್-19 ಎರಡನೇ ತರಂಗವು ಹರಡದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಅನುಸರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕಾಲ ಕಾಲಕ್ಕೆ ಮಾರ್ಗಸೂಚನೆಗಳನ್ನು ಹೊರಡಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತಾ ಹಿತದೃಷ್ಟಿಯಿಂದ ಕೆಲವು ನಿರ್ಬಂಧನೆಗಳನ್ನು ವಿಧಿಸುವುದು ಅನಿವಾರ್ಯವಾಗುತ್ತದೆ. ಮುಂದುವರೆದು, ಹೊಸ ವರ್ಷದ ಆಚರಣೆಯಲ್ಲಿ ಅತೀ ಹೆಚ್ಚಿನ ಜನರು ಸೇರುವ ಸಂಭವಿರುವುದರಿಂದ, ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತಾ ಹಿತದೃಷ್ಟಿಯಿಂದ ಕೆಲವು ನಿರ್ಬಂಧಗಳನ್ನು ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.