ಬಳ್ಳಾರಿ: ಕೋವಿಡ್-19 ಹಿನ್ನಲೆಯಲ್ಲಿ ಈ ಬಾರಿಯ ಹೊಸ ವರ್ಷವನ್ನು ಅತ್ಯಂತ ಸರಳವಾಗಿ ಹಾಗೂ ಶಾಂತಿಯುತವಾಗಿ ಆಚರಿಸಬೇಕು ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಬಾರಿ ಅತ್ಯಂತ ಶಾಂತಿಯುತವಾಗಿ ಹೊಸ ವರ್ಷವನ್ನು ಆಚರಿಸಿ. ದಿನೇದಿನೇ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿವೆ. ಇನ್ನಷ್ಟು ನಿಯಂತ್ರಿಸುವ ಸಲುವಾಗಿ ಸರಳವಾಗಿ ಹೊಸ ವರ್ಷ ಆಚರಿಸಿ. ಹೊಸದಾಗಿ ಬ್ರಿಟನ್ ಕೊರೋನಾ ಭೀತಿಯೂ ಸಹ ಇದೆ. ಡಿ.31 ರಿಂದ ಜ.2 ರವರೆಗ ಮಧ್ಯರಾತ್ರಿ ಹನ್ನೆರಡು ಗಂಟೆಯ ಮೇಲೆ ಪಬ್, ಕ್ಲಬ್, ರೆಸ್ಟೋರೆಂಟ್ಗಳನ್ನು ತೆರೆಯುವಂತಿಲ್ಲ ಎಂದರು. ಡಿಜೆ ಹಾಕಿಕೊಂಡು ಪಾರ್ಟಿ ಮಾಡುವಂತಿಲ್ಲ;ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಮುಖ್ಯ ರಸ್ತೆಗಳು ಮತ್ತು ಆಯಾ ತಾಲೂಕಿನ ಪ್ರಮುಖ ನಗರ,ಪಟ್ಟಣ ಕೇಂದ್ರಗಳಲ್ಲಿ ಈಗಾಗಲೇ ಬ್ಯಾರಿಕೇಡ್ ಮತ್ತು ಚೆಕ್ಪೋಸ್ಟ್ಗಳನ್ನು ಹಾಕಲಾಗಿದೆ. ಹೊಸ ವರ್ಷ ಆಚರಣೆ ದಿನ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಕಲ ಕ್ರಮಕೈಗೊಂಡಿದೆ ಎಂದರು.
ಕೋವಿಡ್ನಿಂದ ಸಾರ್ವಜನಿಕರು ಬದುಕುವ ಪದ್ಧತಿಯೇ ಬದಲಾಗಿದೆ. ಹೊಸ ವರ್ಷದ ಖುಷಿಯಲ್ಲಿ ಎಲ್ಲರೂ ಒಂದು ಕಡೆ ಸೇರಿ ವಿಶೇಷ ಪಾರ್ಟಿಗಳನ್ನು ಮಾಡುವುದರಿಂದ ಕೊರೋನ ಹರಡುವಿಕೆ ಹೆಚ್ಚಾಗಬಹುದು. ಹಾಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ, ಗೆಳಯರೊಂದಿಗೆ ಸರಳವಾಗಿ ಆಚರಣೆ ಮಾಡಿ ಎಂದು ಸಲಹೆ ನೀಡಿದರು.