ಬಳ್ಳಾರಿ: ಮೊಬೈಲ್ ಮತ್ತು ಇ-ಮೇಲ್ ಐಡಿಗಳಿಗೆ ಸಂದೇಶ ಕಳುಹಿಸಿ ಉಚಿತವಾಗಿ ಹಣ ಬರುತ್ತೆ ಎಂದು ಯಾಮಾರಿಸುವ ಮೂಲಕ ಅಮಾಯಕರಿಂದ ಹಣ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದು ಹ್ಯಾಕರ್ ಗಳ ಕೆಲಸವಾಗಿದೆ. ಜನರು ಆನ್‍ಲೈನ್ ಖದೀಮರ ಬಗ್ಗೆ ಎಚ್ಚರವಹಿಸಬೇಕು ಎಂದು ಎಸ್ಪಿ ಸೈದುಲು ಅಡಾವತ್ ಅವರು ಸಲಹೆ ನೀಡಿದರು.
ಅವರು ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಾರ್ಖಾಂಡ್, ಉತ್ತರ ಪ್ರದೇಶ, ದೆಹಲಿಯ ಹ್ಯಾಕರ್ ಗಳು ರಾಜ್ಯದ ಅಮಾಯಕ ಜನರಿಂದ ಹಣವನ್ನು ಯಾಮಾರಿಸಿ ದೋಚುತ್ತಿದ್ದಾರೆ. ಇದರ ಸುಳಿಗೆ ಸಿಲುಕಿದ ಹಲವಾರು ಜನರು ಸಾಲ ಮಾಡಿ, ಬಂಗಾರ ಅಡವಿಟ್ಟು ಹ್ಯಾಕರ್‍ಗಳಿಗೆ ದುಡ್ಡು ಕಳಿಸಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ಬಂದಿಲ್ಲ, ಬದಲಾಗಿ ತಾವು ಕಳಿಸಿದ ಹಣವೂ ಕಳ್ಳರ ಪಾಲಾಗಿದೆ ಎಂದು ವಿವಿಧ ಉದಾರಣೆಗಳನ್ನು ನೀಡಿದ ಎಸ್ಪಿ ಅವರು ಕಳೆದ ತಿಂಗಳಲ್ಲಿ ಈ ಕುರಿತು ಮೂರು ಪ್ರಕರಣಗಳು ದಾಖಲಾಗಿವೆ ಎಂದರು.
ಆನ್‍ಲೈನ್ ಖದೀಮರ ಬಗ್ಗೆ ಎಚ್ಚರವಹಿಸಿ ಇಂತಹ ಸಂದೇಶಗಳು ನಿಮ್ಮ ಮೊಬೈಲ್‍ಗೆ ಬಂದರೆ ಅವುಗಳನ್ನು ನಿರ್ಲಕ್ಷಿಸಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಅತ್ಯಂತ ಸುಸೂತ್ರವಾಗಿ ಜರುಗಿದ್ದು, 79 ಅಬಕಾರಿ ಸಂಬಂಧಿತ ಪ್ರಕರಣಗಳು ದಾಖಲಾಗಿವೆ.1500 ಲೀಟರ್ ಮದ್ಯವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ 250 ಪ್ರಕರಣ ದಾಖಲಾಗಿವೆ ಎಂದು ಅವರು ವಿವರಿಸಿದರು.