ವಿಶ್ವ ಸಾಹಿತ್ಯಕ್ಕೇ ವಚನ ವಾಙ್ಮಯವು ನೀಡಿದ ವಿಶಿಷ್ಟ ಕಾಣಿಕೆ – ಟಿ ಕೆ ಗಂಗಾಧರ ಪತ್ತಾರ ಬಣ್ಣನೆ

ಬಳ್ಳಾರಿ: ವಚನ ವಾಙ್ಮಯವು ಭಾರತೀಯ ಸಾಹಿತ್ಯ ಮಾತ್ರವಲ್ಲ ವಿಶ್ವ ಸಾಹಿತ್ಯಕ್ಕೇ ಕನ್ನಡ ನಾಡು ನೀಡಿದ ವಿಶಿಷ್ಟ ಕಾಣಿಕೆ ಎಂದು ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರು ಬಣ್ಣಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಕನ್ನಡ ಉಪನ್ಯಾಸಕ ಎ.ಎಂ.ಪಿ.ವೀರೇಶ ಸ್ವಾಮಿ ಅವರ ಮನೆಯಲ್ಲಿ ಆಯೋಜಿಸಿದ್ದ 246ನೇ ಮಾಸಿಕ “ಮಹಾಮನೆ” ಸಮಾವೇಶಮತ್ತು ಕೆ.ಎಂ.ಗವಿಸಿದ್ಧಯ್ಯ ಸರೋಜಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಂಟನೂರು ವರ್ಷಗಳ ಹಿಂದೆಯೇ ವರ್ಣ-ವರ್ಗ-ಜಾತಿಭೇದ ರಹಿತ ಸಮಾಜದ ಕನಸನ್ನು ವೈಚಾರಿಕ ತಳಹದಿಯ ಶರಣ ಚಳುವಳಿಯ ಮುಖೇನ ಕಟ್ಟಲಾಯಿತು. , ಮಹಿಳಾ ಸ್ವಾತಂತ್ರ್ಯ-ಸರ್ವೋದಯ-ಸಮಾನತೆ, ಸತ್ಯ-ಶುದ್ಧ-ಕಾಯಕದಿಂದಲೇ ಸರ್ವಮಾನವ ಪ್ರಗತಿ ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದವರು- ಬಸವಾದಿ ಪ್ರಮಥರು ಎಂದು ತಿಳಿಸಿದರು.
ಕನ್ನಡ ಸಾರಸ್ವತ ಲೋಕದ ದಿವ್ಯ”ಅಸ್ಮಿತೆ”ಯಾದ ವಚನ ಸಾಹಿತ್ಯದಂತಹ ವಿಶಿಷ್ಟ-ವಿಭಿನ್ನ ಪ್ರಕಾರವನ್ನು ಭಾರತದ ಅಷ್ಟೇ ಏಕೆ ಜಗತ್ತಿನ ಯಾವುದೇ ಭಾಷೆಯಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಭಾವಪರವಶರಾಗಿವಹೇಳಿದರು.
ವೇದ-ಉಪನಿಷತ್ತುಗಳ ಸಂಸ್ಕೃತದ ಕಬ್ಬಿಣ ಸಂಕೋಲೆಯಲ್ಲಿ ಬಂಧಿತವಾಗಿದ್ದ ಜನೋಪಯುಕ್ತ ವಿಚಾರಗಳನ್ನು ದೇಸೀ ಕನ್ನಡದ ಆಡುನುಡಿಯಲ್ಲಿ ಸರಳವಾಗಿ ಹಾಡಿ ಜನಮನದ ಕೊಳೆ ತೊಳೆದವರು- ಶಿವ ಶರಣರು”ಎಂದು ವಿವರಿಸಿದರು.
.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ರೀಜನಲ್ ಆಫೀಸರ್, ವಿಚಾರವಾದಿ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ ಅವರು “ವೇದ-ವೇದ ತತ್ವ ಅವನಾರವ ಅವನಾರವ ಅಂತ ನನ್ನನ್ನ ದೂರ ನಿಲ್ಲಿಸಿತ್ತು, ಬಸವ ತತ್ವ ಇವ ನಮ್ಮವ ಇವ ನಮ್ಮವ ಅಂತ ಹತ್ತಿರಕ್ಕೆ ಕರೆದುಕೊಂಡಿತು ಎಂದು ಮಾರ್ಮಿಕವಾಗಿ ಹೇಳಿದರು.
ಮನು ಶಾಸ್ತ್ರ ನನ್ನನ್ನ ಶೂದ್ರ ಅಂತ್ಹೇಳಿ ತಿರಸ್ಕರಿಸಿತ್ತು, ವಚನ ಸಾಹಿತ್ಯ ನನ್ನನ್ನ ಶರಣ ಅಂತ ಪುರಸ್ಕರಿಸಿತ್ತು. ವಚನಗಳಲ್ಲಿರುವ ವೈಚಾರಿಕತೆಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳ ಬೇಕಾದ ಅಗತ್ಯವಿದೆ. ಎಂದರು.
ಅನುಭವ ಮಂಟಪ ರೂವಾರಿ ಅಲ್ಲಮ ಪ್ರಭು ಅವರ ಗುರು ಅನಿಮಿಷಾರ್ಯ ಮಹಾನ್ ವಿಚಾರವಾದಿ. ಆಗ ವಿಚಾರವಾದಿ ಶಬ್ದ ಬಳಕೆಯಲ್ಲಿರಲಿಲ್ಲ. ಅವರನ್ನು ಖಂಡಿತವಾದಿಯೆಂದು ಕರೆಯಲಾಗುತ್ತಿತ್ತು ಎಂದು ಹೇಳಿದರು.
ಬುದ್ಧತತ್ವದ ಮುಂದುವರಿಕೆಯೇ ಬಸವ ತತ್ವ. “ಶರಣ” ಪದ ಬಂದದ್ದು ಬುದ್ಧನಿಂದಲೇ ಧಮ್ಮದಿಂದಲೇ ಎನ್ನುವುದು ದಿಟ. ಬುದ್ಧಂ ಸರಣಂ ಗಚ್ಛಾಮಿ, ಧಮ್ಮಂ ಸರಣಂ ಗಚ್ಛಾಮಿ, ಸಂಘ ಸರಣಂ ಗಚ್ಛಾಮಿ ಈ ಬುದ್ಧ ತ್ರಿಸರಣದಲ್ಲಿ ಬರುವ “ಸರಣಂ” ಶಬ್ದವೇ ಶರಣ ಶಬ್ದದ ಮೂಲ ”ಎಂದು ಚಿತ್ತಾಕರ್ಷಕ ಶೈಲಿಯಲ್ಲಿ ಸಾರವತ್ತಾಗಿ ವಿವರಿಸಿದರು.
ಹೊಸ ಬದುಕಿಗೆ ವಚನಗಳ ಬೆಳಕು”-ಎಂಬ ವಿಷಯದ ಕುರಿತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಡಾ.ಕೊಟ್ರೇಶ ಅವರು ಉಪನ್ಯಾಸ ನೀಡಿದರು.
ಬಸವಣ್ಣ ಅವರ “ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ….” ವಚನವನ್ನು ಮತ್ತು ಈ ಕಾರ್ಯಕ್ರಮದ ಪ್ರಾಯೋಜಕ ವೀರೇಶ ಸ್ವಾಮಿಯವರು ಬರೆದ “ಜಾತಿಯಾ ಕೋತಿಯೊಂದು ನನ್ನೊಳಿರೆ/ ಪ್ರೀತಿಯಾ ನೀತಿಯನು ನಾ ಹೇಗೆ ಕವನಿಸಲಿ, ಉಗ್ರವಾದದ ವ್ಯಾಘ್ರವೆ ನಾನಾಗಿರಲು ಕರುಣೆಯ ಕತೆಯನು ನಾ ಹೇಗೆ ಕಥಿಸಲಿ ”ಎಂಬ ಕವನವನ್ನು ಪತ್ತಾರ್ ಅವರು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.
ಸನ್ಮಾನ: ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಗುರು 94ವರ್ಷದ ವಯೋವೃದ್ಧ ಹೊಳಗುಂದಿ ಎ.ಎಂ.ಪಿ.ಸದಾಶಿವ ಮೂರ್ತಿ, ಡಾ. ಅಪ್ಪಗೆರೆ, ಪತ್ತಾರ್ ಹಾಗೂ ಡಾ.ಕೊಟ್ರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶರಣ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಚ್.ವಿ.ಹೊಂಬಳ್ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಚಾಂದ್ ಪಾಷಾ ನಿರೂಪಿಸಿದರು.
ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನಗೌಡರು, ನಿವೃತ್ತ ಪ್ರಾಚಾರ್ಯ ಸಿ.ಬಿ.ಪುರದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಜ್ಞಾನದಾಸೋಹದ ಬಳಿಕ ಪ್ರಸಾದ ದಾಸೋಹದೊಂದಿಗೆ ಮಾಸಿಕ ಮಹಾಮನೆ ಕಾರ್ಯಕ್ರಮ ಮಂಗಳಗೊಂಡಿತು.