ಪೊಲೀಸ್ ಠಾಣೆಗಳಿಗೆ ನಿರ್ಭಯಾ ದ್ವಿಚಕ್ರವಾಹನಗಳ ವಿತರಣೆ

ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಸಮಸ್ಯೆಗಳು ಹಾಗೂ ಅವರ ದೂರುಗಳಿಗೆ ತಕ್ಷಣವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ನಿರ್ಭಯಾ ನಿಧಿ ಅಡಿ ಬಳ್ಳಾರಿ ಜಿಲ್ಲೆಗೆ ಒಟ್ಟು 39 ದ್ವಿಚಕ್ರ ವಾಹನಗಳು ಮಂಜೂರಾಗಿವೆ.
ದ್ವಿಚಕ್ರವಾಹನಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ನಗರದ ಡಿಎಆರ್ ಮೈದಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಸೈದಲು ಅಡಾವತ್ ಅವರು ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಹಿಳೆ ಮತ್ತು ಮಕ್ಕಳ ಸಮಸ್ಯೆಗಳು ಹಾಗೂ ದೂರುಗಳಿಗೆ ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣ ತೆರಳಿ ಸ್ಪಂದಿಸುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 39 ನಿರ್ಭಯಾ ದ್ವಿಚಕ್ರ ವಾಹನಗಳು ನಮ್ಮ ಜಿಲ್ಲೆಗೆ ಬಂದಿದ್ದು,ಅವುಗಳನ್ನು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ವಿತರಿಸಲಾಗುವುದು ಎಂದರು.
ನಿರ್ಭಯಾ ನಿಧಿ ಸೇರಿದಂತೆ ವಿವಿಧ ಅನುದಾನಗಳಡಿ ಸೌಕರ್ಯಗಳನ್ನು ಸರಕಾರ ನೀಡುತ್ತಿದ್ದು,ಈ ಮೂಲಕ ಠಾಣೆಗಳ ಬಲವರ್ಧನೆಯಾಗುತ್ತಿವೆ ಎಂದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಅವರು ಮಾತನಾಡಿ, ಕಳೆದ ವರ್ಷ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 30 ಸದಸ್ಯರು ಒಳಗೊಂಡ ಟೀಂ ದುರ್ಗಾ ತಂಡಗಳನ್ನು ರಚಿಸಲಾಗಿತ್ತು;ಅವುಗಳು ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಮುಂದಿನ ದಿನಗಳಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಈ ತಂಡಗಳನ್ನು ವಿಸ್ತರಿಸಲಾಗುವುದು ಎಂದರು.
ನಿರ್ಭಯಾ ನಿಧಿ ಅಡಿ ದ್ವಿಚಕ್ರವಾಹನಗಳ ನೀಡಿಕೆಯಿಂದಾಗಿ ಮಹಿಳೆಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಇನ್ನಷ್ಟು ಅನುಕೂಲವಾಗಲಿದೆ ಎಂದರು.
ನಂತರ ನಿರ್ಭಯಾ ದ್ವಿಚಕ್ರವಾಹನಗಳ ಮುಖಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯು ಸಂಚಾರ ನಿಯಮಗಳ ಕುರಿತು ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ನಗರದ ವಿವಿಧೆಡೆ ಸಂಚರಿಸುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಸರ್ದಾರ್, ರಮೇಶಕುಮಾರ, ಸತ್ಯನಾರಾಯಣ,ಸಿಪಿಐಗಳಾದ ನಾಗರಾಜ ಮಡಿವಾಳ,ಸುಭಾಷ,ನಾಗರಾಜ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
*****