ಬಳ್ಳಾರಿ: ಜಿಲ್ಲಾ ಖನಿಜ ನಿಧಿಯ ಅನುದಾನದಡಿ ಬಳ್ಳಾರಿ ಜಿಲ್ಲಾಡಳಿಡ ಈ ಭಾಗದ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಒದಗಿಸಲು ಅಣುಕು ಪರೀಕ್ಷೆ ಮೂಲಕ ಆಯ್ಕೆ ಮಾಡಿ ಅಭ್ಯರ್ಥಿಗಳನ್ನು ತರಬೇತಿ ಕೊಡಿಸಲು ಸಿದ್ಧತೆ ನಡೆಸಿದೆ.
ಬಳ್ಳಾರಿಯ ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹೊಸಪೇಟೆ,ಸಂಡೂರು,ಹಡಗಲಿ, ಹಗರಿಬೊಮ್ಮನಹಳ್ಳಿ, ಸಿರಗುಪ್ಪ, ಕೂಡ್ಲಿಗಿ, ಹರಪನಹಳ್ಳಿ ತಾಲೂಕು ಕೇಂದ್ರಗಳಲ್ಲಿ ಭಾನುವಾರ ಅಣುಕು ಪರೀಕ್ಷೆ ಅತ್ಯಂತ ಸೂಸುತ್ರವಾಗಿ ನಡೆಯಿತು.
ಅಣುಕು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದ ಪದವಿ ಮುಗಿಸಿದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಪರೀಕ್ಷೆ ಬರೆದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್,ಪ್ರೋಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರು ಸೇರಿದಂತೆ ಅಧಿಕಾರಿಗಳು ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವುದನ್ನು ಪರಿಶೀಲಿಸಿದರು.
ಈ ಅಣುಕು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ 150 ವಿದ್ಯಾರ್ಥಿಗಳನ್ನು ಪರಿಗಣಿಸಿ ಅವರನ್ನು ಜ.10ರಂದು ಕೌನ್ಸೆಲಿಂಗ್ ನಡೆಸಲಾಗುತ್ತದೆ. ಅದರಲ್ಲಿ ಅರ್ಹರಾದವನ್ನು ತರಬೇತಿಗೆ ಕಳುಹಿಸಿಕೊಡಲಾಗುತ್ತದೆ.
ರಾಜ್ಯದ ಪ್ರಸಿದ್ಧ ಐಎಎಸ್ ತರಬೇತಿ ಸಂಸ್ಥೆಗಳಲ್ಲೊಂದಾದ ಇನ್‍ಸೈಟ್ಸ್‍ನ ಸಂಪನ್ಮೂಲ ವ್ಯಕ್ತಿಗಳ ತಂಡ ಜನೆವರಿ ಮೂರನೇ ವಾರದಿಂದ ತರಬೇತಿ ಆರಂಭಿಸಲಿದೆ. ಒಂದು ವಾರದಲ್ಲಿ 5 ದಿನಗಳ ಕಾಲ ಪ್ರತಿನಿತ್ಯ 6 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ ಎಂದು ಪ್ರೋಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರು ತಿಳಿಸಿದರು.
ಭಾನುವಾರ ನಡೆದ ಪರೀಕ್ಷಾ ಕಾರ್ಯಕ್ಕೆ ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎ. ಹೇಮಣ್ಣ ಅವರು ಸಹಕರಿಸಿದರು.