ಭಾರತದ ಮೊಟ್ಟಮೊದಲ ಶಿಕ್ಷಕಿ”ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಸ್ತ್ರೀರತ್ನ ಸಾವಿತ್ರಿಬಾಯಿ ಫುಲೆ ಅವರು.
“ಅಕ್ಷರದವ್ವ” ಎಂದು ಭಾರತೀಯರು ಗೌರವಿಸಲ್ಪಡುವ ಸಾವಿತ್ರಿಬಾಯಿ ಫುಲೆಯವರ ಜನ್ಮದಿನ ಇಂದು(ಜನೆವರಿ-3)
ಈ ನಿಮಿತ್ತ ಹಿರಿಯ ಸಾಹಿತಿ ಟಿ ಕೆ ಗಂಗಾಧರ ಪತ್ತಾರ ಅವರು ಮಹಾ ತಾಯಿಗೆ ನುಡಿಗೌರವ ಸಮರ್ಪಿಸಿದ್ದಾರೆ.
-ಸಂಪಾದಕರು, ಕರ್ನಾಟಕ ಕಹಳೆ ಡಾಟ್ ಕಾಮ್
*****
‘ಅಕ್ಷರದವ್ವ’ ಸಾವಿತ್ರಿಬಾಯಿ ಫುಲೆ
——
ಜ್ಯೋತಿಬಾ ಫುಲೆ ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಕ್ರಾಂತಿಯ ಮೂಲಪುರುಷರು. ಸಮಾನತೆಯ ಹರಿಕಾರರಾಗಿ ದೀನ-ದಲಿತ-ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತ ಶ್ರಮಿಸಿದರು. ಜನಸಾಮಾನ್ಯರು ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೇ ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷೆಪಟ್ಟವರು. ಸ್ವ ಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾದಾನದ ಪವಿತ್ರ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡದ್ದನ್ನು ಮೆಚ್ಚಿದ ಬ್ರಿಟಿಷ್ ಸರ್ಕಾರ ಜ್ಯೋತಿಬಾ ಫುಲೆಯವರನ್ನು ಗೌರವಾದರದಿಂದ ಸತ್ಕರಿಸಿತು. ಆಗ ಜ್ಯೋತಿಬಾ ಫುಲೆ “ನಿಜವಾಗಿ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದೆದುರಿಸಿ ನಿನ್ನ ವೈಯಕ್ತಿಕ ಸುಖ-ಸಂತೋಷ ಮರೆತು ಸಮರ್ಪಣಾಭಾವದಿಂದ ಪ್ರತಿ ಶಾಲೆಗೂ ಹೊಸ ರೂಪ-ಚೈತನ್ಯ ತುಂಬಿರುವೆ.” ಎಂದು ತಮಗೆ ಹೊದಿಸಿದ ಶಾಲನ್ನು ತಮ್ಮ ಸತಿ ಸಾವಿತ್ರಿಬಾಯಿ ಫುಲೆಯವರಿಗೆ ಹೊದಿಸಿದಾಗ ಸಭಿಕರೆಲ್ಲರೂ ದೀರ್ಘ ಕರತಾಡನದೊಂದಿಗೆ ಗೌರವ ಸೂಚಿಸಿದರು. ಹೀಗೆ ಪತಿಯಿಂದ ಪ್ರಶಂಸೆ-ಗೌರವ ಪಡೆದ ಧೀಮಂತ ಮಹಿಳೆ, ಸಾವಿತ್ರಿಬಾಯಿ ಫುಲೆ!
ಭಾರತದಲ್ಲಿ ಅಸ್ಪೃಶ್ಯರಂತೆ ಮತ್ತೊಂದು ಶೋಷಿತ ವರ್ಗ-ಮಹಿಳೆಯರದು. ವಿದ್ಯೆ ಕಲಿಯಲು ಅರ್ಹಳಲ್ಲದ ಸ್ತ್ರೀ ಪುರುಷನ ಅಡಿಯಾಳಾಗಿಯೇ ಇರಬೇಕು, ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಗಂಡ, ಮುಪ್ಪಿನಲ್ಲಿ ಮಗನ ರಕ್ಷಣೆಯಲ್ಲಿರಬೇಕೆಂಬುದು ಮನುಸ್ಮೃತಿಯ ಕ್ರೂರ ಶಾಸನ. ವಿದ್ಯೆ ಕೆಲವರ ಸೊತ್ತಾಗಿತ್ತು. ವಿದ್ಯಾವಂಚಿತ ಸ್ತ್ರೀಯರು ಶೂದ್ರರಂತೆ ಗುಲಾಮಗಿರಿಯಲ್ಲಿ ನಲುಗುತ್ತಿದ್ದರು. ಇಂಥ ಸಂಕಷ್ಟ ಸ್ಥಿತಿಯಲ್ಲಿ ಮೊದಲು ಅಸ್ಪೃಶ್ಯರಿಗೆ-ಸ್ತ್ರೀಯರಿಗೆ ವಿದ್ಯೆಯ ಬಾಗಿಲು ತೆರೆದವರು ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಅವರ ಧರ್ಮಪತ್ನಿ ಸಾವಿತ್ರಿಬಾಯಿ ಫುಲೆ.
ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸಮಾನತೆ ಸಾಧ್ಯವೆಂಬ ಸಿದ್ಧಾಂತದಲ್ಲಿ ನಂಬಿಕೆಯಿದ್ದ ಫುಲೆ ದಂಪತಿಗಳು ಕ್ರಾಂತಿಕಾರಿ ಹೆಜ್ಜೆಯಿಟ್ಟು ಶೂದ್ರ-ಅತಿಶೂದ್ರ ಮತ್ತು ಸ್ತ್ರೀಯರಿಗೆ ವಿದ್ಯೆ ನೀಡುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. ಪುಣೆಯ ತಾತ್ಯಾ ಸಾಹೇಬ ಭಿಡೆಯವರ ಮನೆಯಲ್ಲಿ 1848ರಲ್ಲಿ ಭಾರತದ ಪ್ರಪ್ರಥಮ ಖಾಸಗಿ ಮಹಿಳಾ ಶಾಲೆ ಆರಂಭಿಸಿದ ಫುಲೆ ಹಲವು ತೊಂದರೆ ಎದುರಿಸಬೇಕಾಯ್ತು. ಸ್ತ್ರೀಶಿಕ್ಷಣ ವಿರೋಧಿಗಳು ಫುಲೆ ತಂದೆಯವರನ್ನು ಹೆದರಿಸಿ ಶಾಲೆ ಪ್ರಾರಂಭಿಸದಂತೆ ಒತ್ತಡ ಹೇರಿದರೂ ನಿರ್ಧಾರದಿಂದ ಹಿಂದೆ ಸರಿಯದ ಜ್ಯೋತಿಬಾ ತಂದೆಯ ಮನೆಯನ್ನು ತೊರೆಯಲೂ ಹಿಂಜರಿಯಲಿಲ್ಲ.
ಆದರೆ ಈ ಶಾಲೆಯಲ್ಲಿ ಶಿಕ್ಷಕರಾಗಲು ಯಾರೂ ಮುಂದೆ ಬರಲಿಲ್ಲ. ಯಾವ ಬೆದರಿಕೆಗೂ ಜಗ್ಗದೇ ತಮ್ಮ ಪತ್ನಿ ಸಾವಿತ್ರಿಬಾಯಿಗೆ ವಿದ್ಯೆ ಕಲಿಸಿ, ತರಬೇತುಗೊಳಿಸಿ ತಮ್ಮ ಶಾಲೆಯ ಶಿಕ್ಷಕಿಯಾಗಿ ನೇಮಿಸಿ ಕೊಂಡರು. ಆಗ ಸ್ತ್ರೀ ಶಾಲೆಗೆ ಹೋಗುವುದಿರಲಿ, ಮನೆಯಿಂದ ಹೊರಹೋಗುವುದೂ ದುಸ್ತರವಾಗಿತ್ತು. ಬೇರೆ ಗಂಡಸರೊಂದಿಗೆ ಮಾತಾಡಿದರೆ ಗಂಡನಿಗೆ-ಕುಟುಂಬಕ್ಕೆ ದ್ರೋಹಬಗೆದಂತೆಂಬ ಭಾವನೆಯಿತ್ತು. ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುತ್ತಿದ್ದ ತಾಯ್ತಂದೆಯರ ಮನವೊಲಿಸಲು ಫುಲೆ ದಂಪತಿಗಳು ತುಂಬಾ ಕಷ್ಟಪಡಬೇಕಾಯಿತು. ಹುಡುಗಿಯರಿಗಾಗಿ ಶಾಲೆ ತೆರೆದದ್ದು, ಪತ್ನಿಯನ್ನೇ ಶಿಕ್ಷಕಿಯಾಗಿ ನೇಮಿಸಿದ್ದು ಇವೆರಡೂ ಸಂಪ್ರದಾಯವಾದಿ ಬ್ರಾಹ್ಮಣರ ಪ್ರಕಾರ ಘೋರ ಅಪರಾಧ ವಾಗಿದ್ದವು. ಫುಲೆಯವರದು ನಿರ್ಭೀತ ನಡಿಗೆ, ಪತಿಗೆ ತಕ್ಕಂತೆ ಸಾವಿತ್ರಿಬಾಯಿಯವರದೂ ದಿಟ್ಟ ಧೀರೋದಾತ್ತ ನಡಿಗೆ. ಅವರು ಶೋಷಿತರಿಗೆ-ಮಹಿಳೆಯರಿಗೆ ಶಿಕ್ಷಣ ನೀಡುವ ಮಹತ್ಕಾರ್ಯದಲ್ಲಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದರು.
ಈ ಮಹಿಳಾ ಶಾಲೆಗೆ ಪ್ರಪ್ರಥಮವಾಗಿ ದಾಖಲಾದವರು-ಅನ್ನಪೂರ್ಣಾ ಜೋಶಿ, ಸುಮತಿ ಮೊಕಾಶಿ, ದುರ್ಗಾ ದೇಶಮುಖ, ಮಾಧುರಿ ಥಟ್ಟೆ, ಸೋನು ಪವಾರ್, ಜಾನಿ ಕರದಿಲೆ-ಎಂಬ ಆರು ಬಾಲಕಿಯರು. ಭಾರತದ ಪ್ರಪ್ರಥಮ ಸ್ತ್ರೀ ಶಾಲೆಯ ಮೊದಲ ವಿದ್ಯಾರ್ಥಿನಿಯರು. ಆರು ವರ್ಷ ಕೆಳಗಿನವರಾದ ಇವರಲ್ಲಿ ನಾಲ್ವರು-ಬ್ರಾಹ್ಮಣರು, ಒಬ್ಬಳು-ಮರಾಠಾ, ಒಬ್ಬಳು-ಕುರುಬರ ಮನೆಯವಳು. ತರಬೇತಿ ಪಡೆದು ಮುಖ್ಯೋಪಾಧ್ಯಾಯಿನಿಯಾದ ಸಾವಿತ್ರಿಬಾಯಿ ಸಂಪ್ರದಾಯವಾದಿಗಳ ಕಿರುಕುಳಕ್ಕೀಡಾದರು. ಶಾಲೆಗೆ ಹೋಗುವಾಗ ಹೆಂಗಸರು ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಮೈಮೇಲೆ ಕಲ್ಲು-ಮಣ್ಣು -ಸೆಗಣಿ ತೂರುತ್ತಿದ್ದುದರಿಂದ ತಲೆಗೆ ಮೈಗೆ ಗಾಯಗಳಾಗುತ್ತಿದ್ದವು. ಅವರಿಗಿದ್ದದ್ದು ಎರಡೇ ಸೀರೆ. ಒಂದು ಸೀರೆ ಉಟ್ಟು ಇನ್ನೊಂದನ್ನು ಬ್ಯಾಗಿನಲ್ಲಿಟ್ಟುಕೊಂಡು ಬರುತ್ತಿದ್ದರು. ಸೆಗಣಿಯಿಂದ ಹೊಲಸಾದ ಸೀರೆಯನ್ನು ಶಾಲೆಯಲ್ಲಿ ಕಳಚಿಟ್ಟು ಮತ್ತೊಂದು ಸೀರೆ ಉಟ್ಟುಕೊಳ್ಳುತಿದ್ದರು. ನಿಂದೆ-ತೊಂದರೆ ಮರೆತು ವಿದ್ಯಾದಾನದ ಪವಿತ್ರ ಕರ್ತವ್ಯದಲ್ಲಿ ತನ್ಮಯರಾಗುತ್ತಿದ್ದರು. ಫುಲೆ ದಂಪತಿಗಳು ಐದು ವರ್ಷಗಳಲ್ಲಿ-ಪುಣೆಯ ಬುಧವಾರಪೇಟೆಯ ತಾತ್ಯಾಸಾಹೇಬ ಭಿಡೆ ಅವರ ಮನೆ ಹಾಗೂ ಅಣ್ಣಾಸಾಹೇಬ ಚಿಪಳೂಣಕರ್ ಮನೆ, ಹಿಂದುಳಿದ ವರ್ಗಗಳ ಬಾಲಕಿಯರಿಗಾಗಿ ಗಂಜ್ ಪೇಟೆ ಸದಾಶಿವರಾವ ಗೋವಂದೆ ಮನೆ, ರಾಸ್ತಾಪೇಟೆಯಲ್ಲಿ, ವೇತಲ್ ಪೇಟೆಯಲ್ಲಿ-ಹೀಗೆ ಐದು ಶಾಲೆ ತೆರೆದರು. ಈ ಎಲ್ಲಾ ಶಾಲೆಗಳ ಒಟ್ಟು ವಿದ್ಯಾರ್ಥಿನಿಯರ ಸಂಖ್ಯೆ-235.
ಶಾಲೆಗಳ ಪ್ರಗತಿ ಕಂಡು ಬೆರಗಾದ ಬ್ರಿಟಿಷ್ ಸರ್ಕಾರ ಪುಣೆಯ ವಿಕ್ರಮ್ ಬಾಗ್ ನಲ್ಲಿ 1852ನೇ ನವಂಬರ್-16ರಂದು ಫುಲೆ ದಂಪತಿಗಳನ್ನು ಶಾಲು ಹೊದಿಸಿ ಮಾನಪತ್ರ ನೀಡಿ ಸನ್ಮಾನಿಸಿತು. ಸಾವಿತ್ರಿಬಾಯಿಯವರ ಸತತ ಪ್ರಯತ್ನದ ಫಲವಾಗಿ ಸಾತಾರಾ ಮತ್ತು ನಗರ ಜಿಲ್ಲೆಗಳಲ್ಲಿ ಶೂದ್ರ-ಅತಿಶೂದ್ರ ವರ್ಗಗಳ ಬಾಲಕಿಯರಿಗಾಗಿ ಶಾಲೆ ತೆರೆಯಲಾಯಿತು.
ಜ್ಯೋತಿಬಾ ಫುಲೆಯವರ ಸಾಧನೆಗಳಲ್ಲಿ ಸಾವಿತ್ರಿಬಾಯಿಯವರದು ಸಿಂಹಪಾಲು. ಪತಿಯ ಮಹತ್ಕಾರ್ಯದಲ್ಲಿ ಮನಸಾರೆ ಕೈಜೋಡಿಸಿದ ಅವರು ಎಂದೂ-ಎಂಥ ಪರಿಸ್ಥಿತಿಯಲ್ಲೂ ಹಿಂದೆ ಸರಿಯಲಿಲ್ಲ. ಬ್ರಿಟಿಷ್ ಸರಕಾರದ ಸನ್ಮಾನ ಕಾರ್ಯಕ್ರಮದಲ್ಲಿ “ಸಾವಿತ್ರಿ ಬಾಯಿ ಇಲ್ಲದೇ ಹೋಗಿದ್ದರೆ ನಾನೊಬ್ಬ ರೈತನಾಗುತ್ತಿದ್ದೆ, ಶಾಲೆ ತೆರೆಯುವ ನಿರ್ಧಾರಕ್ಕೆ ಆಕೆ ಎರಡು ಮಾತಿಲ್ಲದೆ ಒಪ್ಪಿಕೊಂಡು-ಹಲವು ಕಷ್ಟ ಎದುರಿಸಿ ನಿಜವಾದ ಅರ್ಥದಲ್ಲಿ ಗೃಹಲಕ್ಷ್ಮಿ ಅಲ್ಲ ನನ್ನ ಭಾಗ್ಯಲಕ್ಷ್ಮಿಯಾದಳು. ಅವಳ ಧೈರ್ಯ-ಸ್ಥೈರ್ಯ ಶ್ಲಾಘನೀಯ” ಎಂದು ಪತ್ನಿಯ ಗುಣಗಾನ ಮಾಡಿದರು. ಸಮಾಜದ ಕಣ್ಣಲ್ಲಿ ಸತಿ- ಪತಿಯರಾಗಿದ್ದರೂ ಅವರೆಂದೂ ಸಾಂಸಾರಿಕ ಸುಖ-ಭೋಗಗಳತ್ತ ಮನಸ್ಸು ಹರಿಸಲಿಲ್ಲ. ಶೋಷಿತ ಸಮುದಾಯಗಳ ಉದ್ಧಾರಕ್ಕೆ ಜೀವತೇಯ್ದ ಅವರು ವಿಧವೆಯ ಮಗುವನ್ನು ದತ್ತುತೆಗೆದುಕೊಂಡರು. ಫುಲೆ ದಂಪತಿಗಳು ವಿಧವಾ, ಅಂತರ್ಜಾತಿ ವಿವಾಹಗಳಲ್ಲದೆ ಪುರೋಹಿತರಿಲ್ಲದ ಮದುವೆಗಳನ್ನೂ ಮಾಡಿಸಿದ್ದರು. ಸಾವಿತ್ರಿಬಾಯಿಯ ದಲಿತ ಶಿಷ್ಯೆ 11ವರ್ಷದ ಮುಕ್ತಾಬಾಯಿ ಚಾತುರ್ವರ್ಣ ವ್ಯವಸ್ಥೆ ಪ್ರಶ್ನಿಸಿ, ಸನಾತನ ನಂಬಿಕೆ ಧಿಕ್ಕರಿಸಿ, ಅಕ್ಷರದ ಹಿಲಾಲು ಬೆಳಕಿನಲ್ಲಿ ತತ್ತ್ವ-ಸತ್ವ-ದೃಷ್ಟಿಯಿಂದ, ಮಹಾಪ್ರಬಂಧವೆನ್ನಬಹುದಾದ, ಎಳೆ ಮನಸಿನ ನಿಲುವು ಕಣ್ಣ ಮುಂದೆ ಬಿಚ್ಚಿಕೊಳ್ಳುವ ಸುಸ್ಪಷ್ಟ ಕಾರಣಗಳ ಲೇಖನವನ್ನು1855ರಲ್ಲಿ ಅಹ್ಮದನಗರದ `ಧ್ಯಾನೋದಯ’ ಪತ್ರಿಕೆ ಪ್ರಕಟಿಸಿದೆ. ಇಂಥ ಅನೇಕ ಮಾನವೀಯ ಮನಸುಗಳನ್ನು ಸೃಷ್ಟಿಸಿದ ಶ್ರೇಯಸ್ಸು ಸಾವಿತ್ರಿಬಾಯಫುಲೆಯೆಂಬ ದಿವ್ಯ ಚೇತನಕ್ಕೆ ಸೇರುತ್ತದೆ. ಪ್ರಬುದ್ಧ ಲೇಖಕಿ-ಕವಯಿತ್ರಿಯಾಗಿದ್ದ ಸಾವಿತ್ರಿಬಾಯಿಯ ಸತ್ಕಾರ್ಯದಿಂದ ಪ್ರೇರಿತರಾದ ವಾಳ್ವೆಕರ್ ಪ್ರಾರಂಭಿಸಿದ ‘ಗೃಹಿಣಿ’ ನಿಯತಕಾಲಿಕೆಗೆ ಸಾವಿತ್ರಿಬಾಯಿ ಕವನ-ಲೇಖನ ಬರೆಯುತ್ತಿದ್ದರು. “ಕಾವ್ಯಫುಲೆ”ಮೊದಲ ಕವನಸಂಕಲನದಲ್ಲಿ ಶಿಕ್ಷಣ, ಜಾತಿವಿನಾಶ, ಮಕ್ಕಳ ಕಲ್ಯಾಣ, ಸಾಮಾಜಿಕ ಸುಧಾರಣೆಯಂಥ ಮಹತ್ವದ ವಿಷಯಗಳ ಕವನಗಳಿವೆ. ಪ್ರಕೃತಿವರ್ಣನೆ ಯ ‘ಜೈಚಿ ಕಲಿ’ ಮತ್ತು ‘ಗುಲಾಬಚೆ ಫೂಲ್’ನಂಥ ಸುಂದರ ಕವನಗಳ ಮತ್ತೊಂದು ಸಂಕಲನ ಜ್ಯೋತಿಬಾ ನಿಧನದ ನಂತರ ಪ್ರಕಟವಾಯ್ತು. ಸಾವಿತ್ರಿಬಾಯಿ ಫುಲೆ ತಮ್ಮ ಪತಿ ಜ್ಯೋತಿಬಾ ಫುಲೆಯವರ ಭಾಷಣಗಳ ಸಂಪಾದಿತ ನಾಲ್ಕು ಸಂಪುಟಗಳನ್ನು ಮತ್ತು ತಮ್ಮ ವೈಯಕ್ತಿಕ ಭಾಷಣಗಳ ಸಂಗ್ರಹ ಪ್ರಕಟಿಸಿದ್ದರು. ಎಂ.ಜಿ.ಮಾಳಿಯವರು ಸಾವಿತ್ರಿಬಾಯಿ ಫುಲೆ ಪತಿಗೆ ಬರೆದ ಎರಡು ಕೈಬರಹದ ಪತ್ರ ಸಂಗ್ರಹಿಸಿದ್ದಾರೆ. ಒಂದರಲ್ಲಿ ಪತಿ ಜ್ಯೋತಿಬಾ ಫುಲೆಯವರ ಶಿಕ್ಷಣಪ್ರಸಾರದ ಮಹತ್ವ ಅರಿತುಕೊಳ್ಳಲಾರದ ತಮ್ಮ ಸೋದರನನ್ನು ಟೀಕಿಸಿದ್ದಾರೆ. ಈ ಎರಡೂ ಪತ್ರಗಳಲ್ಲಿ ಸಾಮಾಜಿಕ ಸುಧಾರಣೆಯ ಚರ್ಚೆ ಇರುವುದು ಗಮನಾರ್ಹ. 1867ರಲ್ಲಿ ನಿಧನರಾಗುವ ವರೆಗೂ ಅವರ ಸಾಮಾಜಿಕ ಚಳವಳಿ ನಿರಂತರ ಸಾಗಿತ್ತು. ಕೆಳಸ್ತರದ ಜನರ ಮೆದುಳನ್ನಾಳುತ್ತಿದ್ದ ಉಚ್ಚ ವರ್ಗದವರ ಕ್ರೌರ್ಯ ಕಿತ್ತೊಗೆಯಲು ತಮ್ಮನ್ನು ಸಮರ್ಪಿಸಿಕೊಂಡು ದುಡಿದ ಸಾಹಸಗಾಥೆ ಫುಲೆ ದಂಪತಿಗಳದು. ಮೇಲ್ವರ್ಗ, ಮೇಲ್ಜಾತಿಗಳ ದಬ್ಬಾಳಿಕೆ-ದೌರ್ಜನ್ಯದಲ್ಲಿ ನರಳುತ್ತಿದ್ದ ದಮನಿತ ಲೋಕಕ್ಕೆ ಸಮಾನತೆಯ ಕಿರಣಗಳು ಬೇಕಾಗಿದ್ದ ಹೊತ್ತಿನಲ್ಲಿ ಸಾವಿತ್ರಿಬಾಯಿ ಫುಲೆ ಪತಿಯೊಡನೆ ಅಕ್ಷರವೆಂಬ ಅರಿವಿನ ಬೆಳಕು ಹಿಡಿದು ಬಂದರು. ಸಾವಿತ್ರಿಬಾಯಿ ಇಲ್ಲದೇ ತಾವು ಯಾವುದೇ ಸಾಧನೆ ಮಾಡಲು ಸಾಧ್ಯರಲಿಲ್ಲ, ಎಲ್ಲ ಹಂತದಲ್ಲೂ, ಎಂಥ ಸಂಕಷ್ಟಕರ ಪರಿಸ್ಥಿತಿಯಲ್ಲೂ ಧೈರ್ಯ-ಉತ್ಸಾಹ ತುಂಬಿದವರೆಂಬುದನ್ನು ಜ್ಯೋತಿಬಾ ಫುಲೆ ಸದಾ ಸ್ಮರಿಸುತ್ತಿದ್ದರು. ಪತಿಯ ಸಾಮಾಜಿಕ ಚಳುವಳಿಗಳಿಗೆ ಹೆಗಲು ನೀಡಿದ ಸಾವಿತ್ರಿಬಾಯಿ ಪತಿಯ ನಿಧನಾನಂತರ ‘ಸತ್ಯಶೋಧಕ ಸಮಾಜ’ ಪ್ರಾರಂಭಿಸಿ ಯಶಸ್ವಿಯಾಗಿ ಮುನ್ನಡೆಸಿ ಜ್ಯೋತಿ ಬಾ ಫುಲೆ ಪ್ರಾರಂಭಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಾಂತಿಯನ್ನು ಮುಂದುವರೆಸಿಕೊಂಡು ಬಂದರು. ಬ್ರಾಹ್ಮಣ ವಿಧವೆಯ ಮಗನನ್ನು ದತ್ತು ತೆಗೆದುಕೊಂಡಿದ್ದರು. ೧೮೯೭ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.
*****
-ಟಿ.ಕೆ. ಗಂಗಾಧರ ಪತ್ತಾರ
ಬಳ್ಳಾರಿ
ಮೊಬೈಲ್: 9008226702