ಅನುದಿನ ಕವನ-೦೩

ಇಷ್ಟಂತೂ ಹೇಳಬಲ್ಲೆ!

ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!

ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!

ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!

ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!

ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!

ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!

ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!

ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!

ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!

ನಾವು ಈ ನೆಲದ ಮಕ್ಕಳು
ಬೆಂಕಿಯೂ‌.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!!

~ರಂಗಮ್ಮ ಹೊದೇಕಲ್