ಬಳ್ಳಾರಿಯಲ್ಲಿ ನಾಳೆ(ಜ.4) ರಾಜ್ಯಸಭಾ ಸದಸ್ಯರ ಅಧಿಕೃತ ಕಚೇರಿ ಉದ್ಘಾಟನೆ

ಬಳ್ಳಾರಿ: ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರ ಅಧಿಕೃತ ಕಚೇರಿ ಉದ್ಘಾಟನೆ ನಾಳೆ ಸೋಮವಾರ(ಜ.4) ನಗರದ ಬೂಡಾ ಕಚೇರಿಯ ನೆಲಮಹಡಿಯಲ್ಲಿ ಬೆಳಗ್ಗೆ 10:30ಕ್ಕೆ ನಡೆಯಲಿದೆ.
ಶಾಸಕರಾದ ಅಲ್ಲಂ ವೀರಭದ್ರಪ್ಪ, ಕೆ ಸಿ ಕೊಂಡಯ್ಯ, ಪಿಟಿ ಪರಮೇಶ್ವರ ನಾಯ್ಕ,ಇ. ತುಕಾರಾಂ, ಬಿ.ನಾಗೇಂದ್ರ, ಜೆ ಎನ್ ಗಣೇಶ್, ಬೂಡಾ ಅಧ್ಯಕ್ಷ ದಮ್ಮೂರು ಶೇಖರ್, ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಮತ್ತು ಎಸ್ಪಿ ಸೈದುಲು ಅಡಾವತ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭಾ ಸದಸ್ಯರಾಗಿ ಎರಡು ವರ್ಷಗಳಾದರೂ ಡಾ. ನಾಸೀರ್ ಹುಸೇನ್ ಅವರ ಅಧಿಕೃತ ಕಚೇರಿ ನಗರದಲ್ಲಿ ಇರಲಿಲ್ಲ.
ಸಾರ್ವಜನಿಕರು ಕೌಲ್ ಬಜಾರ್ ಪ್ರದೇಶದಲ್ಲಿರುವ ಡಾ.‌ಸೈಯದ್ ನಾಸೀರ್ ಹುಸೇನ್ ಅವರ ನಿವಾಸದಲ್ಲಿ ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸುತ್ತಿದ್ದರು.
ಜಿಲ್ಲಾಡಳಿತ ಸುಸಜ್ಜಿತ ನೂತನ ಕಚೇರಿ ನೀಡಿದೆ ಎಂದು ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ತಮ್ಮ ಸಂತೋಷ ಹಂಚಿಕೊಂಡ ಡಾ. ನಾಸೀರ್ ಹುಸೇನ್ ಅವರು, ರಾಜ್ಯ ಸರಕಾರ ರಾಜ್ಯಸಭಾ ಸದಸ್ಯರಿಗೆ ಬೆಂಗಳೂರಿನಲ್ಲಿ ಕಚೇರಿ ನೀಡುತ್ತದೆ. ಆದರೆ ತಾವು ಬಳ್ಳಾರಿ ನಗರದಲ್ಲಿ ಕಚೇರಿಗೆ ಅವಕಾಶ ನೀಡಲು ವಿನಂತಿಸಿದ್ದೆ…ಕೊವೀದ್ ಹಾವಳಿ ಮತ್ತಿತರ ಕಾರಣಗಳಿಂದ ವಿಳಂಬವಾಗಿದೆ. ಆದರೆ ಹೊಸ ವರ್ಷದಲ್ಲಿ ಕಚೇರಿ ಆರಂಭವಾಗಿರುವುದಕ್ಕೆ ಸಂತೋಷವಾಗುತ್ತಿದೆ ಎಂದು‌ ಹೇಳಿದರು.
ಕಾಂಗ್ರೆಸ್ ಪಕ್ಷದ ಜಿಲ್ಲೆಯ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆ. ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯ್ಕ ಅವರ ಹೆಸರಿಲ್ಲದ ಬಗ್ಗೆ ಕೇಳಿದ್ದಕ್ಕೆ, ಎರಡು ಮೂರು ದಿನಗಳಿಂದಲೂ ತಮ್ಮ ಸಿಬ್ಬಂದಿ ಭೀಮನಾಯ್ಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.ಅವರ ಒಪ್ಪಿಗೆ ತೆಗೆದುಕೊಂಡು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲು ಹೇಳಿದ್ದೆ. ಈ ಹಿನ್ನಲೆಯಲ್ಲಿ ಬಿಟ್ಟು ಹೋಗಿರಬೇಕು. ಭೀಮನಾಯ್ಕ ಅವರು ನನ್ನ ಆತ್ಮೀಯ ಸ್ನೇಹಿತರು. ತಾವೇ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ. ಬೇರೆ ಯಾವ ಕಾರಣಗಳು ಇಲ್ಲ ಎಂದು ತಿಳಿಸಿದರು.