ಬಳ್ಳಾರಿ: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಿಣಿ ಸೇತುವೆ ಬಳಿ ಜ. 12 ರಿಂದ 3 ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ ಆಯೋಜಿಸಲಾಗಿದೆ ಎಂದು ಮಾಜಿ ಸಚಿವರು, ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ದಿನ ಬೀರದೇವರ ಉತ್ಸವಕ್ಕೆ ಚಾಲನೆ ನೀಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವೈಭವಕ್ಕೆ ಸಂಭ್ರಮ ತರಲಿದ್ದಾರೆ.
ಎರಡನೆ ದಿನ ಸುಡುಗಾಡು ಸಿದ್ಧರು, ಟಗರು ಜೋಗಿಗಳು ಹೆಳವರ ಸಮಾವೇಶ ನಡೆಯಲಿದೆ. ಮೂರನೇ ದಿನ ಶ್ರೀ ಬೊಮ್ಮಗೊಂಡೇಶ್ವರ, ಶ್ರೀ ಸಿದ್ಧರಾಮೇಶ್ವರ ಉತ್ಸವ ಜರುಗಲಿದೆ. ಟಗರು ಕಾಳಗ, ರಕ್ತ ಪರೀಕ್ಷೆ, ರಕ್ತದಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಮೂರು ದಿನಗಳ ಉತ್ಸವದಲ್ಲಿ ಹಿರಿಯ ಸಚಿವ ಕೆಎಸ್ ಈಶ್ವರಪ್ಪ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅರಣ್ಯ ಸಚಿವ ಆನಂದ್ ಸಿಂಗ್ ಸೇರಿದಂತೆ ಹಲವು ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಡಾ.ಹೆಚ್.ಜೆ.ಲಕ್ಕಪ್ಪಗೌಡ ಅವರಿಗೆ ಹಾಲುಮತ ಭಾಸ್ಕರ, ಸಮಾಜ ಸೇವೆಗಾಗಿ ಎಂ.ಎಸ್.ಹೆಳವರ ಅವರಿಗೆ ಪದ್ಮಶ್ರೀ ಮತ್ತು ಹಾಲುಮತ ಸಂಸ್ಕೃತಿಗೆ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಸುಭದ್ರಮ್ಮ ಕಾಡಮಂಚಪ್ಪ ಗೊಸಲೇರು ಅವರಿಗೆ ಕನಕ ರತ್ನ ಪ್ರಶಸ್ತಿಗಳನ್ನು ತಲಾ 50 ಸಾವಿರ ನಗದು ಜತೆ ಗೌರವಪೂರ್ವಕವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹಾಲುಮತ ಸಮಾಜದ ಮುಖಂಡರಾದ ಕೆಎಸ್ಎಲ್ ಸ್ವಾಮಿ, ಕೆಬಿ ಶಾಂತಪ್ಪ, ಬೆಣಕಲ್ ಬಸವರಾಜಗೌಡ, ಡಾ.ಕೆ.ಬಸಪ್ಪ, ಕೆ.ಎರಿಸ್ವಾಮಿ, ಜೀವೇಶ್ವರಿ ರಾಮಕೃಷ್ಣ, ಬಿಎಂ ಪಾಟೀಲ್, ಕಾಮೇಶ್, ಕೆ.ಮಲ್ಲಿಕಾರ್ಜುನ, ಕೆ.ಮಲ್ಲೇಶ್ ಇನ್ನಿತರರು ಇದ್ದರು.