ಅನುದಿನ ಕವನ-೧೦

ಪುಟ್ಟ ಮರ

ಪುಟ್ಟ ಮರವೆ ಪುಟ್ಟ ಮರವೇ
ಪುಟ್ಟ ಮೌನಿ ಕ್ರಿಸ್ಮಸ್ ಮರವೇ
ನೀನೆಷ್ಟು ಪುಟ್ಟ ಮರ ಪುಟ್ಟ ಮರವೇ
ಬಹಳ ಮಾಡಿ ನೀನೊಂದು ಹೂವಿನಂತೆಯೇ

ಯಾರು ನಿನ್ನ ಕಂಡದ್ದು ಹಸಿರು ಕಾಡಿನಲ್ಲಿ
ದುಃಖವಾಯಿತೇನು ನಿನಗೆ ಇಲ್ಲಿ ಬಂದುದಕ್ಕೆ?
ನೋಡು ಮರವೆ ನಿನಗೆ ನಾನು ಸಾಂತ್ವನವನು ನೀಡುವೆ
ಏಕೆಂದರೆ ನೀನು ಮಧುರ ಗಂಧವನ್ನು ಹೊದ್ದಿರುವೆ

ನಿನ್ನ ತಂಪು ತೊಗಟೆಗೆ ಮುತ್ತನಿಡುವೆನು
ಸುರಕ್ಷೆ ಮಾಡಿ ನಿನ್ನ ನಾನು ಅಪ್ಪಿಕೊಳುವೆನು
ನಿನ್ನ ತಾಯಿ ಸಲಹಿದಂತೆ ನಿನ್ನ ನೋಡಿಕೊಳುವೆನು,
ಭಯವ ಬಿಡು, ಭಯವ ಬಿಡು ಜೊತೆಯಾಗಿ ಇರುವೆನು

ನೋಡದೆಷ್ಟು ಒಡವೆ ವಸ್ತ್ರ ಕಪ್ಪು ಪೆಟ್ಟಿಯಲ್ಲಿ
ವರ್ಷಪೂರ್ತಿ ಮಲಗುತ್ತದೆ ದೀರ್ಘ ನಿದ್ರೆಯಲ್ಲಿ
ಹೊರಗೆ ತೆಗೆದು ಥಳಥಳಿಸುವ ಕನಸು ಕಾಣುತ
ಗುಂಡು ಚೈನು ಕೆಂಪು ಚಿನ್ನ ಉಬ್ಬು ದಾರದೆಳೆಗಳ,

ನಿನ್ನ ಪುಟ್ಟ ತೋಳಚಾಚು ನಿನಗೆ ಕೊಡುವೆನು
ಕೈಲಿ ಹಿಡಿಯೆ ನಾನವನ್ನು ನಿನಗೆ ಕೊಡುವೆನು
ಬೆರಳಿಗೊಂದರಂತೆ ಉಂಗುರ ತೊಡಲು ಇಡುವೆನು
ದುಃಖವಿಲ್ಲ ಬೇಸರವೂ ಇಲ್ಲ ಆನಂದ ಮಾತ್ರವು

ಬಳಿಕ ನೀನು ಒಡವೆ ವಸ್ತ್ರ ಎಲ್ಲ ಧರಿಸಲು
ಕಿಟಕಿಯಲ್ಲಿ ನಿಲ್ಲುವೆ ಎಲ್ಲ ನೋಡಲು
ಎವೆಯಿಕ್ಕದೆ ಹೇಗವರು ನಿನ್ನ ನೋಡ್ವರು!
ಓಹ್ ನೀನದೆಷ್ಟು ಹಿಗ್ಗುವೆಯೋ ಹೆಮ್ಮೆಯಿಂದಲಿ

ನನ್ನ ಪುಟ್ಟ ತಂಗಿ ನಾನು ಕೈಯ ಹಿಡಿವೆವು
ನಮ್ಮ ಚೆಲುವ ಮರವ ನಾವು ನೋಡಿ ನಲಿವೆವು
ನಾವು ನೃತ್ಯ ಮಾಡುವೆವು ಹಾಡು ಹಾಡುತ
ಹಬ್ಬ ಬಂತು ಹಬ್ಬವೆಂದು ಹಿಗ್ಗಿ ನಲಿಯುತ

-ಆರ್ ವಿಜಯರಾಘವನ್,
ಹಿರಿಯ ಸಾಹಿತಿ, ಕೋಲಾರ