ವಿಶ್ವವಿಜೇತ ಸ್ವಾಮಿ ವಿವೇಕಾನಂದ
-ಟಿ.ಕೆ.ಗಂಗಾಧರ ಪತ್ತಾರ
ಇಳೆಗಿಳಿದ ಅವಧೂತ
ಸುವಿವೇಕ ನವನೀತ
ಓ!ವೀರ ಸನ್ಯಾಸಿ ಪಾವನ ಪವಿತ್ರ
ಧರ್ಮ ಕರ್ಮದ ಮರ್ಮ
ಅಂತರಂಗವ ಬಲ್ಲ
ಜ್ಞಾನಿ-ಯೋಗಿ-ತಪಸ್ವಿ ಅಧ್ಯಾತ್ಮ ಮಿತ್ರ-1
ಭುವನೇಶ್ವರೀ ವಿಶ್ವ
-ನಾಥದತ್ತರ ಕಂದ
ಬದುಕಿ ಸತ್ತಂತಿಹರ ಬದುಕಿಸಲು ಬಂದೆ
ಪರಮಹಂಸರ ದಿವ್ಯ
ಭವ್ಯ ಮಾನಸ ಪುತ್ರ
ಈ “ಭವ”ಕೆ ಆ “ದಿವ”ದ ಅಮೃತವನೆ ತಂದೆ-2
ರಾಷ್ಟ್ರವನು ಮುಸುಕಿದ್ದ
ಮಾಯೆ-ಮಿಥ್ಯಾ ನಿಶೆಯ
ಸತ್ಯ ಕಿರಣಗಳಿಂದ ಭುಂಜಿಸಿದ ಸೂರ್ಯ
ಕುರುಡು ಶ್ರದ್ಧೆಯ ಬಳ್ಳಿ
ಹರಡಿ ಹಬ್ಬದ ಹಾಗೆ ಬೇರನೇ
ಕಿತ್ತೆಸೆದು ರಂಜಿಸಿದ ಆರ್ಯ-3
ಪ್ರಥಮ ನೋಟದೆ ಪರಮ
ಹಂಸ ಹುಚ್ಚರು ಎಂದು
ಆ ಹುಚ್ಚಿನಲೆ ಜಗವ ಎಚ್ಚರಿಸಿದವರು
ನರ-ಕುರಿಗೆ ಹುಲಿ-ಸಿಂಹ
ಘರ್ಜನೆಯ ಮೊಳಗಿಸುತ
ದಿಟದ ಧೀರೋದಾತ್ತ ನಡೆ ಕಲಿಸಿದವರು-4
ಅಜ್ಞಾನ-ದಾರಿದ್ರ್ಯ
ಕುಬ್ಜ-ಕ್ಲೈಬ್ಯತೆ ತಿಮಿರ
ಸ್ವಪ್ರಭೆಯ ಮರೆತು ಮಲಗಿದ್ದವರ ತಿವಿದು
ಏಳಿ ಎಚ್ಚರಗೊಳ್ಳಿ
ನಿಲ್ಲದೇ ಗುರಿ ತಲುಪಿ
ಪಥ ತೋರಿದಿರಿ ತರುಣ ಪೀಳಿಗೆಗೆ ಅಂದು-5
ದೀನ ದಲಿತರ ಬಂಧು
ಪ್ರೇಮ ಕರುಣೆಯ ಸಿಂಧು
ಕಾಮ-ಮೋಹವ ಗೆದ್ದ ಅಧ್ಯಾತ್ಮ ಭೀಮ
ವಾಸು-ಏಸು-ರಹೀಮ
ಏಸೊಂದು ವಿಧ-ಭೇದ
ನುಡಿದಿರೊಬ್ಬನೆ ದೇವ ಹಲವಾರು ನಾಮ-6
ನಮ್ಮ ಧರ್ಮವು ಮೇಲು-
ನಿಮ್ಮ ಧರ್ಮವು ಕೀಳು
ಎಂಬ ವಾದವ ಖಂಡಿಸಿದ ಯೋಗಿವರ್ಯ
ಮೇಲು-ಕೀಳುಗಳೆಲ್ಲ
ನಮ್ಮ ಭ್ರಮೆಯೆಂದರುಹಿ
ಸಮ-ಸಮಾನತೆಯ ಬೋಧಿಸಿದ
ಆಚಾರ್ಯ-7
ಬಂಧು-ಭಗಿನಿಯರೆನುವ
ಸೂಕ್ಷ್ಮ ಸಂವೇದನೆಯ
ಹೃದಯ ಸ್ಪಂದನೆಯಿಂದ ಜಯಿಸಿದಿರಿ ಜಗವ
ಆ ಜಾಗತಿಕ ಸರ್ವ
ಧರ್ಮ ಸಮ್ಮೇಳನದಿ
ಮೆರೆಸಿದಿರಿ ಭಾರತದ ಸಂಸ್ಕೃತಿಯ ಧ್ವಜವ-8
ಕನ್ಯಾಕುಮಾರಿ ಭೂ-
ಶಿರದವರೆಗಿನ ಪಯಣ
ಪರಿವ್ರಾಜಕಾಚಾರ್ಯ ಆರ್ಷೇಯ ಸಂತ
ತತ್ವ ಬನದ ಬಸಂತ
ಜ್ಞಾನಗಿರಿಯ ಮಹಂತ
ಯೋಗಿ ಭಾಸ್ಕರ ದಿವ್ಯ ಸ್ಮರಣೆಯೆ ಪುನೀತ-9
ಕಿರಿವಯದಿ ಹಿರಿದನ್ನು
ಸಾಧಿಸಿದ ಮಹನೀಯ
ಸುರಭಿಸಿತು ನಿನ್ನಿಂದ ಭಾರತದ ಹಿರಿಮೆ
ವಿಶ್ವ ಭಾರತಿ ಕಂದ
ಶ್ರೀ ವಿವೇಕಾನಂದ ನಿರುತ ಬೆಳಗುತಲಿಹುದು ತವ ಕೀರ್ತಿ ಮಹಿಮೆ-10
~~~~~~