ಬಳ್ಳಾರಿ, ಜ.೧೫: ದೇಶಪ್ರೇಮದ ಸಂಕೇತ ಭಾರತದ ಸಂವಿಧಾನ ಎಂದು ಹಿರಿಯ ಪತ್ರಕರ್ತ ಎಂ. ಅಹಿರಾಜ್ ಹೇಳಿದರು.
ನಗರದ ಎಸ್.ಪಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತದ ಸಂವಿಧಾನದ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲಾ ಧರ್ಮೀಯರ ಧರ್ಮ ಗ್ರಂಥ ಭಾರತದ ಸಂವಿಧಾನ. ದೇಶದ ಪ್ರತಿಯೊಬ್ಬ ಪ್ರಜೆಗಳಲ್ಲೂ ರಾಷ್ಟçಭಕ್ತಿ, ದೇಶ ಪ್ರೇಮವನ್ನು ಉಕ್ಕಿಸುವ ಶ್ರೇಷ್ಠ ಆದರ್ಶ ಗುಣಗಳು ನಮ್ಮ ಸಂವಿಧಾನದ ಮಹಾನ್ ಶಕ್ತಿ ಎಂದು ಕೊಂಡಾಡಿದರು.
ವಿಶೇಷ ಉಪನ್ಯಾಸ ನೀಡಿದ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡಸ್ವಾಮಿ(ಮನಂ) ಅವರು, ವಿಶ್ವದಲ್ಲೇ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವೆಂದು ಖ್ಯಾತಿ ಪಡೆದಿದೆ ಎಂದು ತಿಳಿಸಿದರು.
ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವ, ಅಂಬೇಡ್ಕರ್ ಅವರ ಶ್ರೇಷ್ಠ ಚಿಂತನೆಗಳು ಭಾರತದ ಸಂವಿಧಾನದಲ್ಲಿವೆ. ದೇಶದ ಪ್ರತಿ ಪ್ರಜೆಗಳನ್ನು ಸಮಾನವಾಗಿ ನೋಡುವ ಕಾಣುವ ಸಂವಿಧಾನ ಎಲ್ಲಾ ಧರ್ಮೀಯರಿಗೂ ಪವಿತ್ರ ಗ್ರಂಥವೆಂದು ಪ್ರತಿಪಾದಿಸಿದರು.
ಬಳ್ಳಾರಿ ವಲಯದ ಐಜಿ ಕಚೇರಿ ಪ್ರತಿವರ್ಷ ಜ. ೧೪ ರಂದು ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂವಿಧಾನದ ಮಹತ್ವ ಸಾರಲಾಗುತ್ತದೆ ಎಂದು ಮನಂ ಹೇಳಿದರು.
ಹೆಸರಾಂತ ಪರಿಸರಾವಾದಿ ಸಂತೋಷ ಮಾರ್ಟಿನ್ ಅವರು ಮಾತನಾಡಿ ವಿವಿಧತೆಯಲ್ಲಿ ಏಕತೆ ಮೂಡಿಸುವ ಭಾರತೀಯರ ಸಂವಿಧಾನ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು ಎಂದು ತಿಳಿಸಿದರು.
ಸಾಹಿತಿಯೂ ಆಗಿರುವ ಐಜಿಪಿ ಮನಂ ಅವರ ‘ನಾವೆಲ್ಲರೂ ಭಾರತೀಯರು, ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ, ನಮ್ಮ ಧರ್ಮ ಗ್ರಂಥ ಭಾರತದ ಸಂವಿಧಾನ’ ಎನ್ನುವ ಘೋಷವಾಕ್ಯ ಅದ್ಭುತ ಚಿಂತನೆಯಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಗಸಂಯೋಜನೆಗೊಂಡಿರುವ ಘೋಷವ್ಯಾಕ್ಯ ಆಕರ್ಷಕವಾಗಿದೆ. ಇದು ಪ್ರತಿಭಾರತೀಯನನ್ನೂ ತಲುಪಲಿ ಸಂವಿಧಾನದ ಮಹತ್ವವನ್ನು ತಿಳಿಸಲಿ ಎಂದು ಆಶಿಸಿದರು.
ವಿಎಸ್‌ಕೆ ವಿವಿಯ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಾಂದ್ ಭಾಷ ಅವರು ಮಾತನಾಡಿ ಮನಂ ಅವರು ಇತರರ ಭಾವನೆ, ಮನಸುಗಳನ್ನು ಅರ್ಥೈಯಿಸಿಕೊಂಡು ಸಾಹಿತ್ಯ ರಚಿಸುವಲ್ಲಿ ಸಿದ್ಧಹಸ್ತರು. ತಮ್ಮ ಕವಿತೆಗಳಲ್ಲಿ ಸ್ತ್ರೀ ಸಂವೇದನೆಗೆ ಹೆಚ್ಚು ಮಹತ್ವ ನೀಡುವ ಜನಪರ ಕವಿ ಎಂದು ಪ್ರಶಂಸಿಸಿದರು.
ಇವರ ಬರಹಗಳಲ್ಲಿ ವಸ್ತು, ವ್ಯಕ್ತಿಗಳು ಹೊರತಾಗಿಯೂ ಪರಿಕಲ್ಪನೆಗಳಿಗೆ ಜೀವ ತುಂಬುತ್ತಾರೆ. ಲಿಂಗ ತಾರತಮ್ಯವಿಲ್ಲದ, ನಂಜಿಲ್ಲದ ಬರಹಗಳು, ಕವಿತೆಗಳು ಆಪ್ತವಾಗುತ್ತವೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ. ಮಂಜುನಾಥ್ ಅವರು ಮಾತನಾಡಿ, ಮನಂ ಅವರು ಕಲಾ ಪೋಷಕರು. ಸರಳ ಸಜ್ಜನಿಕೆಯ ಹೃದಯವಂತರು. ಜನಸಾಮಾನ್ಯರ ನೋವು ನಲಿವುಗನ್ನು ಅರಿತು ಸ್ಪಂದಿಸುವ ಗುಣವುಳ್ಳ ಅಧಿಕಾರಿ ಎಂದರು.
ಸAಗೀತ ಕಾರ್ಯಕ್ರಮ: ಮನಂ ಅವರ ಕವಿತೆಗಳಿಗೆ ರಾಗಸಂಯೋಜಿಸಿ ಹಾಡಿದ
ಹಗರಿಬೊಮ್ಮನಹಳ್ಳಿಯ ಸಂಗೀತ ಅಧ್ಯಾಪಕಿ ಶ್ರೀಮತಿ ಶಾರದ ಮಂಜುನಾಥ ಅವರ ಗಾಯನ, ಯುವ ಪ್ರತಿಭೆ ಪ್ರದೀಪ್ ಅಕ್ಕಸಾಲಿ ಅವರ ಪೀಟಿಲಿನಲ್ಲಿ ಮೂಡಿಬಂದ ಮಿಶ್ರಮಾಧುರಿ, ಮೊರಿಗೇರಿಯ ಸಿ. ಕೊಟ್ರೇಶ ಅವರ ತಬಲ ವಾದನ ನೆರೆದಿದ್ದ ಸಂಗೀತ ಪ್ರಿಯರನ್ನು ಮುದಗೊಳಿಸಿತು. ಯುವ ಪ್ರತಿಭೆಗಳಾದ ಗಾಯತ್ರಿ, ವರ್ಣಿಕ ಅವರ ಸಹಗಾಯನವೂ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾರತೀಯರು ಘೋಷವಾಕ್ಯವನ್ನು ಕೈಮೇಲೆ ಹಚ್ಚೆ ಹಾಕಿಸಿಕೊಂಡು ಸಂವಿಧಾನದ ಮಹತ್ವ ಸಾರುತ್ತಿರುವ ಬೈಲೂರು ಮಲ್ಲಿಕಾರ್ಜುನ, ಶಾನವಾಸಪುರದ ಶರಣ ಬಸವ, ಟಿಬಿ ಡ್ಯಾಂನ ಸಾಯಿಕುಮಾರ್, ಸಂಗೀತ ಕಾರ್ಯಕ್ರಮ ನೀಡಿದ ಎಲ್ಲಾ ಗಾಯಕರು, ತಬಲವಾದಕರು, ಇಂಕ್ ಆರ್ಟ್ ಮೂಲಕ ಮನಂ ಅವರ ಭಾವಚಿತ್ರ ರಚಿಸಿ ಪ್ರದರ್ಶಿಸಿದ ಯುವ ಕಲಾವಿದ ಚನ್ನನಗೌಡ(ಚನ್ನ ತೀರದ) ಅವರನ್ನು ಐಜಿಪಿ ಅವರು ಗೌರವಿಸಿದರು.
ಇದೇ ಸಂದರ್ಭದಲ್ಲಿ ನಾವೆಲ್ಲರೂ ಭಾರತೀಯರು ಘೋಷವ್ಯಾಕ್ಯದ ನೂತನ ವರ್ಷದ ಕ್ಯಾಲೆಂಡರನ್ನು ಗಣ್ಯರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಐಜಿಪಿ ಕಚೇರಿಯ ಡಿವೈ.ಎಸ್ಪಿಗಳಾದ ಕೆ. ಶಿವಾರೆಡ್ಡಿ, ಶೇಖರ್, ಸಹಾಯಕ ಆಡಳಿತಾಧಿಕಾರಿ ಕೆ. ಮಾರುತಿ, ಬೆಂಗಳೂರಿನ ಲೇಖಕ ಮಾಳವ ಮುನಿರಾಜು, ಸಿಎಮ್‌ಎಸ್ ಜಿಲ್ಲಾಧ್ಯಕ್ಷ ಸಿ. ನರಸಪ್ಪ, ಮುಖಂಡರಾದ ಡಿ.ಎಚ್. ಹನುಮೇಶಪ್ಪ, ಶ್ರೀನಿವಾಸ್, ಕೆ ಎಸ್ ಅಶೋಕ ಕುಮಾರ್, ಚಿತ್ರ ನಿರ್ದೇಶಕ ರಮೇಶ ಆರ್ಯ, ಕೋಲಾರ, ಕುಷ್ಟಗಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮನಂ ಅಭಿಮಾನಿಗಳು ಭಾಗವಹಿಸಿದ್ದರು.