ಸಿರಿಗನ್ನಡ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿರುವ ಡಾ. ಸೌಗಂಧಿಕಾ ವಿ ಜೋಯಿಸ್ ಅವರು ಉತ್ತಮ ಸಂಘಟಕಿ. ಕವಿತೆ,ಗಜಲ್ ರಚನೆ, ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದ, ಸಂಗ್ರಹ ಹೀಗೆ ಬಹುಮುಖ ವ್ಯಕ್ತಿತ್ವದ ಇವರು ಮೈಸೂರು ಜಿಲ್ಲೆಯ ನಂಜನಗೂಡಿನವರು.
ಈಚೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನಾಗಿ ಸರಕಾರ ನೇಮಕ ಮಾಡಿದೆ.
ಸಾಹಿತ್ಯ, ಸಂಘಟನೆಗಾಗಿ ಹಲವು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ.
*****
ಇಂದಿನ “ಅನುದಿನ ಕವನ” ದ ಗೌರವಕ್ಕೆ
ಡಾ. ಸೌಗಂಧಿಕಾ. ವಿ. ಜೋಯಿಸ್ ಅವರ
ಗಜ಼ಲ್ ಗಳು ಪಾತ್ರವಾಗಿವೆ.
(ಸಂಪಾದಕ: ಕರ್ನಾಟಕ ಕಹಳೆ ಡಾಟ್ ಕಾಮ್)
ಡಾ. ಸೌಗಂಧಿಕಾ. ವಿ. ಜೋಯಿಸ್ ಅವರ
ಗಜ಼ಲ್*
! ! ! ! ! ! ! ! ! ! ! ! ! ! ! ! !
ಅಪ್ಪುಗೆಯ ಒಪ್ಪಿಗೆಗೆ ಅಧರ ಕಂಪಿಸುತಿತ್ತು
ನೆನಪಿದೆಯಾ ಸಖಿ
ಆಪ್ಯಾಯತೆಯು ಉಪ್ಪರಿಗೆಗೆ ಉದ್ವಹ ತರಿಸುತ್ತಿತ್ತು ಮರೆತಿದೆಯಾ ಸಖಿ //
ಸ್ವಾರ್ಥವಿಲ್ಲದ ಸಂತಸ ನೆರಳಂತೆ
ಅಂಗಳದಲಿ ಹರಡಿದೆ
ಅರ್ಥವಿರದ ಸುಳಿಯಲಿ ಸಿಲುಕಿ ಎಡರು
ತೊಡರಾಗಿದೆಯಾ ಸಖಿ //
ಹಸನಾದ ಮೃದು ಮನದಲಿ
ಭಾವನೆಯು ಉಕ್ಕೇರಿದೆ
ಜನುಮದ ನಂಟು
ಬದುಕಿನ ಬೆಸುಗೆಗೆ
ಸಾಕ್ಷಿಯಾಗಿದೆಯಾ ಸಖಿ //
ಒಳಿತು ಕೆಡುಕು
ಬಾಳ ಯಾನದಲಿ ಸಹಜವಾಗಿದೆ
ಕಳಿತ ಫಲದಂತೆ ರಸಮಯ ಕ್ಷಣಗಳು
ಸವಿಯಿದೆಯಾ ಸಖಿ //
ನಿಶ್ಚಲ ನಭದಲಿ
ಬೆಳದಿಂಗಳು ಹಾಲು ಚೆಲ್ಲಿದಂತಿದೆ
ಚಿತ್ತದಲ್ಲಿನ ಭಾರ
ಸುಲಭದಿ ಕರ್ಪೂರದಂತೆ ಕರಗಿದೆಯಾ
ಸಖಿ //
ಕೊರಗು ಬೇಡ
ಹಾದಿಯ ಬವಣೆಯು ಸರಿದಿದೆ
ಸುಡುಬಿಸಿಲ ಧಗೆಯು
ಮೋಹ ಪಾಶದಲಿ ತಂಪಾಗಿದೆಯಾ ಸಖಿ //
ಕನಸಿನ ಕಲ್ಪನೆಗಳ ಮಹಾಪೂರ
ನೀಲ್ಗಡಲ ಅಲೆಯಂತಿದೆ
ಮನಸಿನ ಹೊಯ್ದಾಟಕೆ ಒಲವು ಸನಿಹದಲಿ ಹಿತವಾಗಿದೆಯಾ ಸಖಿ //
*( ಉದ್ವಹ – ಆನಂದ)*
# # # # # # # # # # #
ಡಾ. ಸೌಗಂಧಿಕಾ. ವಿ. ಜೋಯಿಸ್.
✍️🌹