ಕವಿ ಪರಿಚಯ (ಎ.ಎಂ.ಪಿ ವೀರೇಶಸ್ವಾಮಿ)
———
ಹೆಸರು: ಎ.ಎಂ.ಪಿ ವೀರೇಶಸ್ವಾಮಿ
ತಂದೆ: ತಾಯಿ; ಎ.ಎಂ.ಪಿ ಸದಾಶಿವ ಮೂರ್ತಿ ಸ್ವಾಮಿ,ಜಯಮ್ಮ
ಜನ್ಮಸ್ಥಳ:ಬಳ್ಳಾರಿ ಜಿಲ್ಲೆ, ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮ
ಜನನ:೧೫.೭.೧೯೭೪
ಶಿಕ್ಷಣ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ,ಹುಟ್ಡೂರಿನಲ್ಲಿ
ಪಿ.ಯು.ಹಾಗು ಕಲಾ ಪದವಿ ಶಿಕ್ಷಣ ಹಡಗಲಿಯ ವೀ.ವಿ ಸಂಘದ ಜಿ.ಬಿ.ಆರ್ ಕಾಲೇಜಿನಲ್ಲಿ
ಬಿ.ಈಡಿ ಹರಪನಹಳ್ಳಿಯ ಟಿ.ಎಂ.ಎ ಇ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಗು.ವಿಯ ಗುಲ್ಬರ್ಗ ದ ಅದ್ಯಯನ ಕೇಂದ್ರ ನಂದಿಹಳ್ಳಿಯಲ್ಲಿ ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸಿದ್ದಾರೆ.
ಗು.ವಿ.ಗುಲ್ಬರ್ಗ ದ ಕನ್ನಡ ಅದ್ಯಯನ ಸಂಸ್ಥೆ ಯಲ್ಲಿ ಡಾ.ವಿ ಜಿ ಪೂಜಾರ್ ಅವರ ಮಾರ್ಗದರ್ಶನದಲ್ಲಿ ” ಕೊಪ್ಪಳ ಒಂದು ಸಾಂಸ್ಕೃತಿಕ ಅಧ್ಯಯನ” ಈ ವಿಷಯ ಕುರಿತ ಸಂಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿರುವರು.
ವಿಶ್ವ ವಿಧ್ಯಾಲಯಗಳ ಹಣಕಾಸು ಆಯೋಗ UGC ನವದೆಹಲಿ ಇವರು ನೆಡೆಸುವ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವೃತ್ತಿ: ೧.೬.೨೦೦೦ ದಿಂದ ಕನ್ನಡ ಉಪನ್ಯಾಸಕರಾಗಿ ವೀರಶೈವ ಕಾಲೇಜ್ ಎಸ್ ಜಿ ಕಾಲೇಜ್ , ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಸಕನಾಗಿ ಹತ್ತು ವರ್ಷ ಸೇವೆ ಸಲ್ಲಿಸಿರುವ ಶ್ರೀ ವೀರೇಶಸ್ವಾಮಿ ಅವರು ೨೦೧೧ ರಿಂದ ವೀ.ವಿ ಸಂಘದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಂಗಕರ್ಮಿ: ರಂಗಭೂಮಿಯ ಮೇಲೆ ವಿಶೇಷ ಒಲವಿರುವ ಶ್ರೀ ವೀರೇಶ್ ಸ್ವಾಮಿ ಅವರು ೩೦೦ ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಪ್ರಮುಖ ನಾಟಕಗಳು:
ಐತಿಹಾಸಿಕ ನಾಟಕಗಳು: ತಲೆದಂಡ ,ಕಾಲಜ್ಞಾನಿ ಕನಕ,ಪುರಂದರದಾಸ ,ಕೃಷ್ಣದೇವರಾಯ, ಶರೀಫ ಮುಂತಾದವು
ಪೌರಾಣಿಕ ನಾಟಕ: ಏಕಲವ್ಯ,ಕುರುಕ್ಷೇತ್ರ, ರಕ್ತರಾತ್ರಿ,ವೀರ ಅಭಿಮನ್ಯು ನಾರದ ಗರ್ವಭಂಗ.
ಭಕ್ತಿ ಪ್ರಧಾನ ನಾಟಕಗಳಾದ ಶರಣ ಸಕ್ಕರೆ ಕರಡೀಶ, ಮಹಾದೇವನೀತ ಅಲ್ಲಿಪುರ ತಾತ ಚಳ್ಳಗುರ್ಕಿ ಎರಿತಾತ ಗುಳ್ಯದ ಗಾದಿಲಿಂಗಪ್ಪ ಹಾಗೂ
ಗೌಡ್ರಗದ್ಲ,ಆಶಾಲತ,ರೈತನ ಮಕ್ಕಳು ಎಚ್ಚರ ತಂಗಿ ಎಚ್ಚರ ರೈತ ನಿನಗ್ಯಾರು ಹಿತ ಸಾಮಾಜಿಕ ನಾಟಕಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ.
ಅನೇಕ ನಾಟಕಗಳಿಗೆ ನಿರ್ದೇಶನ ಮಾಡಿರುವ ವೀರೇಶ ಸ್ವಾಮಿ ಅವರು, ಹಂಪಿ ಉತ್ಸವ, ಗಡಿನಾಡು ಉತ್ಸವ, ಮೈಸೂರು ಬೆಂಗಳೂರು,ಧಾರವಾಡ ಕಲಬುರ್ಗಿ ಮುಂತಾದ ರಾಜ್ಯದ ನಾನಾ ಭಾಗಗಳಲ್ಲಿ ಸಂಚರಿಸಿ ನಾಟಕ ಪ್ರದರ್ಶನ ನೀಡಿದ್ದಾರೆ.
ಸಾಹಿತ್ಯ ಚಟುವಟಿಕೆ: ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ನೆಡೆಸುವ ದತ್ತಿ ಉಪನ್ಯಾಸ ಗಳಲ್ಲಿ ಉಪನ್ಯಾಸಕನಾಗಿ ಪಾಲ್ಗೊಂಡಿದ್ದಾರೆ.
ಜಿಲ್ಲಾ ಹಾಗು ತಾಲೂಕು ಸಮ್ಮೇಳನಗಳಲ್ಲಿ ಕಾರ್ಯಕ್ರಮ ನಿರೂಪಿಸಿದ್ದಾರೆ ಮಾತ್ರವಲ್ಲ ರಾಜ್ಯ ಜಿಲ್ಲಾ ತಾಲೂಕು ಮಟ್ಟದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚಿಸಿರುವರು.
ಎನ್.ಎಸ್ ಎಸ್ ಶಿಬಿರಾಧಿಕಾರಿಯಾಗಿ ಅನೇಕ ಸಮಾಜಸೇವಾ ಕಾರ್ಯಗಳಲ್ಲಿ ಪಾಲ್ಗೊಂಡಿರುವ ವೀರೇಶಸ್ವಾಮಿ ಅವರು ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿಯೂ ಗಮನ ಸೆಳೆದಿದ್ದಾರೆ.
ಇಂದಿನ “ಅನುದಿನ ಕವನ” ದ ಗೌರವಕ್ಕೆ ವೀರೇಶ್ ಸ್ವಾಮಿ ಅವರ ‘ನನ್ನವ್ವ’ ಕವಿತೆ ಪಾತ್ರವಾಗಿದೆ.
*****
ನನ್ನವ್ವ
——–
ಮನೆ ಎಂದರೆ ನನ್ನವ್ವನಿಗೆ
ತನ್ನ ಮನದಷ್ಟೇ ಪ್ರೀತಿ
ಕ್ರಿಯಾಶೀಲೆಯಾದವಳಿಗೆ
ಪ್ರಗತಿಯೊಂದೆ ನೀತಿ
ಅಲಸ್ಯದ ಕಸವ ಗುಡಿಸುವಳು
ನಗೆಯ ನೀರ ಚೆಲ್ಲಿ
ರಂಗೋಲಿಯ ಬರೆಯುವಳು
ಬದುಕಿನ ಅಂಗಳದಲಿ
ಅನುಭವದ ಅಡಿಗೆಯ ಮಾಡುವಳು
ಮಲಿನತೆಯ ಗಡಿಗೆಯನು ತೊಳೆದು.
ಉಣಿಸುವಳು ಪ್ರೀತಿಯನು
ತಾಳ್ಮೆಯ ತಟ್ಟೆಯಲಿ.
ಬೆನ್ನುತಟ್ಟುವಳು ನಮ್ಮ
ಕಾಳು ಚಪ್ಪರಿಸಿದಂತೆ
ಕೆನ್ನೆಗೆ ಬಾರಿಸುವಳು ಅಮ್ಮ
ಜರಡಿಯ ಸಾಣಿಸಿದಂತೆ.
ತೂರುವಳು ನೋವನು
ಜಳ್ಳಿನಂತೆ
ಆಯುವಳು ನಲಿವನು
ಗಟ್ಟಿ ಕಾಳಿನಂತೆ.
ಬೆಳೆಸಿದಳು ಬಳ್ಳಿಯನು
ಕಾಯಕದ ಕೋಲನಿಟ್ಟು
ಕಾಯವ ಸಲುಹಿದಳು
ಮಿತದ ಮದ್ದಿಟ್ಟು
ಮನೆತನವ ಬೆಳಸುತಾ,
ಮಕ್ಕಳ ಸಲುಹುತಾ
ಬಾಳಿದಳು ನಮ್ಮಮ್ಮಹಣತೆಯಾಗಿ
ನಮ್ಮಬಾಳಿನ ನಂದಾದೀಪವಾಗಿ..
*****
-ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ
ಹೊಳಗುಂದಿ ಗ್ರಾಮದ ಅದ್ಭುತ ಬಹುಮುಖ ಪ್ರತಿಭೆ ನಾಡಿನೆಲ್ಲೆಡೆ ಪ್ರಜ್ವಲಿಸಲಿ…. ಹೆಮ್ಮೆ ಎನಿಸುತ್ತದೆ ನಮಗೆ….