ಕವಿ, ಅಂಕಣಕಾರ, ಅಧ್ಯಾಪಕ ಡಾ. ಶಿವಕುಮಾರ ಕಂಪ್ಲಿ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಾಲಯವಿರುವ ಬಾಗಳಿ ಗ್ರಾಮದವರು.
ಪ್ರಸ್ತುತ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿವಕುಮಾರ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ‘ಶ್ರೀ ಶ್ರೀ ಮತ್ತು ಸಿದ್ಧಲಿಂಗಯ್ಯ ನವರ ತೌಲನಿಕ ಅಧ್ಯಯನ’ ಕ್ಕೆ ಪಿ.ಹೆಚ್.ಡಿ.ಪದವಿ ಪಡೆದಿದ್ದಾರೆ.
ಅಗ್ನಿ ಕಿರೀಟ(ಸಂಸ್ಕೃತಿ ಪ್ರಕಾಶನ, ಬಳ್ಳಾರಿ) ಕವನ ಸಂಕಲನ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ತೆಲುಗು ಕವಿ ಆಶಾರಾಜು ಅವರ ಕವಿತೆಗಳ ಅನುವಾದ, ತೆಲುಗು ಅನುವಾದಿತ ಕಥೆಗಳು ಪ್ರಕಟವಾಗಿವೆ.
*****
ಇಂದಿನ “ಅನುದಿನ ಕವನ”ದ ಗೌರವಕ್ಕೆ ಕವಿ ಡಾ. ಶಿವಕುಮಾರ ಕಂಪ್ಲಿ ಅವರ ‘ಅವನು’ ಕವಿತೆ ಪಾತ್ರವಾಗಿದೆ.👇
ಅವನು….
ತಣ್ಣನೆ ಚಂದ್ರನಲ್ಲ
ಉರಿವ ಸೂರ್ಯನಲ್ಲ
ಊರ ದೇವರ ಪವಿತ್ರ ಜಲವಲ್ಲ
ಅಕ್ಷರ ಕಾಣದ ಕಪ್ಪು ಜೀತಗಾರ.
ಅವನು
ಮಂದಿರ, ಮಸೀದಿಯಲ್ಲ
ಚರ್ಚು,ಬಸದಿ ಅಲ್ಲ
ಮನೆ ಮನೆಗಳ ಪಾಯ
ಬೀದಿ ಜೀಕುವ ಕೂಲಿಕಾರ.
ಅವನು
ಪುರಾಣದ ಬೆಳಕಲ್ಲ
ವೇದದ ತುಣುಕಲ್ಲ,ಚರಿತ್ರೆಯ ಕಲ್ಲಲ್ಲ
ಮಳೆ ಕಾಣದ ತುಂಡು ಹೊಲದಲಿ
ನೇಗಿಲು ಹೊತ್ತ ರೈತ.
ಅವನು
ನಿಂತ,ಕುಂತ,ಉದ್ದುದ್ದ ಮಲಗಿದ
ಕುಂಕುಮ,ಗಂಧ,ವಿಭೂತಿಯಲ್ಲ
ಬಿಸಿಲು ಮಳೆಗಳಲಿ ಹೊತ್ತು ಸುತ್ತುವ
ಮಾಲಿಕನ ಕಾಲು ಜೋಡು.
ಅವನು
ಕಟ್ಟುವವನಲ್ಲ,ಕೆಡವುವವನಲ್ಲ
ಕ್ರಾಂತಿಕಾರಿ,ಹೋರಾಟಗಾರನಲ್ಲ
ತಣ್ಣನೆಯ ಎಣ್ಣೆ ದೀಪ
ಹೆಸರಿರದ ಹಕ್ಕಿ ನಿಶ್ಯಬ್ದ ಸಂಸಾರಿ.
-ಡಾ.ಶಿವಕುಮಾರ್ ಕಂಪ್ಲಿ
One thought on “ಅನುದಿನ ಕವನ-೨೧”
Comments are closed.