ಬಳ್ಳಾರಿ: ರಾಜ್ಯದ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದು ತಮ್ಮ ಹಲವು ಕನ್ನಡಪರ ಕಾರ್ಯಗಳಲ್ಲಿ ಪ್ರಮುಖ ಆದ್ಯತೆಯಾಗಿದೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರೂ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ. ಕೆ. ರಾಮೇಗೌಡ ಅವರು ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು.
ಗ್ರಾಮೀಣ ಪ್ರದೇಶ ಹಾಗೂ ಗಡಿಭಾಗಗಳಲ್ಲಿರುವ ಕನ್ನಡ ಶಾಲೆಗಳನ್ನು ದತ್ತು ಪಡೆದು ಆಧುನೀಕರಣಗೊಳಿಸುವ ಮೂಲಕ ಸಬಲೀಕರಣಗೊಳಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
‘ಗ್ರಾಮಕ್ಕೊಂದು ವಾಚನಾಲಯ, ಪಂಚಾಯಿತಿಗೊಂದು ಗ್ರಂಥಾಲಯ’ ಹೋಬಳಿ ಮಟ್ಟದಲ್ಲಿ ಹಳೆಗನ್ನಡ ಮರು ಓದು ಹಾಗೂ ಗಮಕ ವಾಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರತಿ ತಾಲೂಕು ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಿಸುವುದು, ಜನಪದ ಕಲಾಪ್ರದರ್ಶನ ಏರ್ಪಡಿಸುವುದು ಹಾಗೂ ಆಸಕ್ತರಿಗೆ ಜನಪದ ಕಲಾಪ್ರದರ್ಶನ ಏರ್ಪಡಿಸುವುದು. ಜಿಲ್ಲಾ ಮಟ್ಟದಲ್ಲಿ ಯುವ ಬರಹಗಾರರಿಗೆ ಉತ್ತೇಜನ ನೀಡುವುದು. ಇವರ ಉತ್ತಮ ಕೃತಿಗಳನ್ನು ಪ್ರಕಟಿಸುವುದು, ಸಾಹಿತ್ಯ ರಚಿಸಲು ಆರಂಭಿಸುವ ಹೊಸ ಬರಹಗಾರರಲ್ಲಿ ಬರವಣಿಗೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸಲು ವಿಶೇಷ ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸುವುದು ಸೇರಿದಂತೆ ಹಲವು ನನ್ನದೇ ಆದ ಕನಸುಗಳಿದ್ದು ಇವುಗಳ ಅನುಷ್ಠಾನಕ್ಕೆ ಶ್ರಮಿಸುತ್ತೇನೆ ಎಂದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ ಠಾಕ್ರೆ ಸೇರಿದಂತೆ ಹಲವು ರಾಜಕಾರಣಿಗಳ ಉದ್ಧಟತನದ ಹೇಳಿಕೆಗಳನ್ನು ಖಂಡಿಸುವುದಾಗಿ ರಾಮೇಗೌಡ ತಿಳಿಸಿದರು.
ರಾಜ್ಯದಲ್ಲಿರುವ ಮರಾಠಿ ಮಾತನಾಡುವವರು ಮಹಾರಾಷ್ಟ್ರದ ರಾಜಕಾರಣಿಗಳ ಹೇಳಿಕೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ಕನ್ನಡ ನಾಡಿಗೆ ಆಗುವ ಸಣ್ಣ ಅವಮಾನವನ್ನು ಸಹಿಸುವುದಿಲ್ಲ. ಇಂತಹ ಹೇಳಿಕೆಗಳನ್ನು ಕನ್ನಡ ಜನ ಶಕ್ತಿ ಕೇಂದ್ರ ಪ್ರಬಲವಾಗಿ ವಿರೋಧಿಸುತ್ತದೆ ಖಂಡಿಸುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕನ್ನಡ ಪರ ಹೋರಾಟಗಾರ ಶಂಕರ ಹೂಗಾರ, ಕಸಾಪ ಆಜೀವ ಸದಸ್ಯರಾದ ಜಿ. ಗುರುಲಿಂಗಪ್ಪ, ಜೆ. ಪಂಪಾಪತಿ, ರಾಮಲಿಂಗಪ್ಪ, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.