.
ರಸ್ತೆ
ಉದ್ದಕ್ಕೂ ರಸ್ತೆ
ಉಬ್ಬು ತಗ್ಗುಗಳಿಲ್ಲದ
ಟಾರು ಮೆತ್ತಿದ
ಕಡು ಕಪ್ಪಿನ ರಸ್ತೆ
ಎಡಕ್ಕೆ ತಿರುಗಿ
ಬಲಕ್ಕೆ ತಿರುಗಿ
ಉದ್ದಕ್ಕೂ ಬೋರ್ಡುಗಳು
ಸಮಾಜ ಹಂಗಿಲ್ಲ
ಉದ್ದಕ್ಕೂ ಮರ
ಮಧ್ಯೆ ಮಧ್ಯೆ
ದಣಿವಾದರೆ
ಕೂಲ್ ಪಾರ್ಲರ್
ತಿನ್ನಬೇಕೆನಿಸಿದರೆ
ಡಾಬಾ, ಹೋಟೆಲ್ಲು
ಜಾತಿ ಗೀತಿ
ಕೇಳುವವರಿಲ್ಲ
ಸಮಾಜದಲಿ ಹಂಗಿಲ್ಲ
ಯಾವ ಜಾತಿ? ಯಾರ ಮಗ?
ನಮ್ಮವರಾದರೆ ಸಮಾಗಮ
ಅಲ್ಲವಾದರೆ ಹಲ್ಲು ಕಿರಿತದ
ಯಾವ ದೇಶದ ಪ್ರಜೆ ಎಂಬ
ನೂರು ಪ್ರತಿಶತ
ತಾರತಮ್ಯ
ಬಂದ ರಸ್ತೆಗೆ
ಬುದ್ಧಿಯುಂಟು
ಬದುಕುವ ಸಮಾಜಕೆ
ಬುದ್ಧಿಯಿಲ್ಲ
ತಪ್ಪು ಸಮಾಜದ್ದೋ
ಆ ಸಮಾಜಕ್ಕೆ ಕಾರಣವಾದ
ಶಾಸ್ತ್ರ ಪುರಾಣದ್ದೋ
ರಸ್ತೆ ದಿಕ್ಕು
ತೋರುತ್ತಿದೆ
ಎಡಕ್ಕೆ ತಿರುಗು
ಬಲಕ್ಕೆ ತಿರುಗು
ಬೋರ್ಡು ಹಿಡಿದು
ಮನೆಯಿಹುದು ಅಲ್ಲಿ
ಸಮಾಜ ದಿಕ್ಕಾಪಾಲಾಗಿ
ನಿಂತಿದೆ ನೂರಾರು
ಬೋರ್ಡುಗಳ
ತರಹೇವಾರಿ ದಿಕ್ಕುಗಳ
ಗೋಜಲಿನಲ್ಲಿ
ಸದ್ಯಕ್ಕೆ ಅಲ್ಲಲ್ಲಿ
ವೃತ್ತಗಳಲ್ಲಿ
ಬಂದು ನಿಂತಿವೆ
ಕೈತೋರುತ ಸಂವಿಧಾನ
ಹಿಡಿದ ಅಂಬೇಡ್ಕರರ
ವಿಗ್ರಹಗಳು
ನಾ ಆ ಬೆರಳು ತೋರಿದ
ಹಾದಿಯಲ್ಲಿ…
ಸಮಾನತೆಯ ರಸ್ತೆ
ನನ್ನ ಜೊತೆಯಲ್ಲಿ…
-ರಘೋತ್ತಮ ಹೊ.ಬ
ಮೈಸೂರು
👌👌👌