ಚಾಮರಾಜನಗರದ ಮಾಲತಿ ಶಶಿಧರ್ ಅವರು ವೃತ್ತಿಯಲ್ಲಿ ಗಣಿತ ಅಧ್ಯಾಪಕಿ. ಪ್ರವೃತ್ತಿ ಕವಿತೆ ಬರೆಯುವುದು ಹಾಗೂ ಕನ್ನಡದ ಬರಹಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡೋದು ಇವರಿಗೆ ಇಷ್ಟವಾದ ಹವ್ಯಾಸಗಳು..
*****
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಇವರ “ಅನ್ನದಾತನ ಬದುಕು” ಕವಿತೆ ಪಾತ್ರವಾಗಿದೆ.👇
*****
ಅನ್ನದಾತನ ಬದುಕು
ಪೂರ್ವದ ಸೂರ್ಯನಿಗಿನ್ನೂ
ನಿದ್ದೆ ತೀರಿರುವುದೇ ಇಲ್ಲ
ಇವ ಆಗಲೇ ಎದ್ದು ಕೌದಿ ಕಿತ್ತೆಸೆದು ಬಿರಿದ
ಬರಿ ಪಾದದಲೇ ದಾರಿ ಹಿಡಿಯುತ್ತಾನೆ
ಒಡೆದ ಹೃದಯದಲ್ಲೇ ನೆಲದ ತುಂಬಾ
ಭರವಸೆಯ ಬಿತ್ತುತ್ತಾನೆ
ಪಾದದಡಿ ಬತ್ತಿದ ನೆಲದ ಸತ್ಕಾರ
ನೆತ್ತಿ ಮೇಲೆ ಬಿರು ಬಿಸಿಲ ಚಿತ್ತಾರ
ಹಿಂಗಿದ ಜಲಾಶಯ
ಮೌನ ವಹಿಸಿದ ಮಳೆರಾಯ
ಬೆಳೆ ಕಿತ್ತು ಸುಗ್ಗಿ ಮಾಡುವನು
ಮುಚ್ಚಿದ ರೆಪ್ಪೆಯೊಳಗೆ
ಬೊಗಸೆ ನೀರು ಸಿಕ್ಕರೂ ಸಾಕಾಗಿದೆ
ಸಾಯುವಾಗಲು ಬರಿ ಬಿಕ್ಕಳಿಕೆ
ಅನ್ನದಾತ ಚಿನ್ನ ಬೆಳೆವ ಕನಸುಗಾರ
ಸಾಲ ಬಡ್ಡಿ ಏರಿಕೆ ಸಂಸಾರ ಬೀದಿ ಪಾಲಿಗೆ
ಚಿಂದಿ ಜೀವ ಬರೀ ನೊಂದ ಭಾವ
ಜಗಕೆ ತುತ್ತಿಕ್ಕಿ ತನ್ಹೊಟ್ಟೆಗೆ
ಹಸಿ ಬಟ್ಟೆ ಸುತ್ತಿ
ಕಣ್ಣ ಹನಿಯಲೇ ನೆಲಕೆ
ನೀರಾಯಿಸಿ ಬೆಳೆದದ್ದು ಮಾತ್ರ
ನೇಣು ಕುಣಿಕೆ ಎತ್ತರದ ನೋವು
ನೇಣು ಕುಣಿಕೆ ಎತ್ತರದ ಸಾವು..
-ಮಾಲತಿ ಶಶಿಧರ್, ಚಾಮರಾಜನಗರ
Suuuuper
Thanks a lot sir. Am grateful to u 😊😊🙏