(ಸಿ.ಮಂಜುನಾಥ್)
ಬಳ್ಳಾರಿ: ಜೋಗತಿ ನೃತ್ಯ ಕಲೆಗೆ ಪದ್ಮಶ್ರೀ ಗೌರವ….
ಹೌದು! ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ, ಜೋಗತಿ ನೃತ್ಯ ಕಲಾವಿದೆ ಮಾತಾ ಬಿ. ಮಂಜಮ್ಮ ಜೋಗತಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಕಲೆ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಅನುಪಮಸೇವೆ ಸಲ್ಲಿಸಿರುವ ಸಾಧಕರಿಗೆ ಕೇಂದ್ರ ಸರಕಾರ ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಘೋಷಿಸುತ್ತಿದ್ದು, ಮೊಟ್ಟ ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆಗೆ ಪ್ರತಿಷ್ಟಿತ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ ಹಿರಿಯ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರು….
ಮಂಜಮ್ಮನ ಸ್ವಂತ ಊರು ಜಿಲ್ಲೆಯ ಕುರುಗೋಡು ತಾಲೂಕಿನ ಕಲ್ಲು ಕಂಬ. ಹುಟ್ಟಿದ್ದು ಕಂಪ್ಲಿಯಲ್ಲಿ. 20-05-1957ರಲ್ಲಿ ತಂದೆ ಬಿ.ಹನುಮಂತ ಶೆಟ್ಟಿ, ತಾಯಿ ಬಿ. ಜಯಮ್ಮ ದಂಪತಿಗಳ 21 ಮಕ್ಕಳಲ್ಲಿ ಇವರೂ ಒಬ್ಬರು. ಎಸ್ ಎಸ್ ಎಲ್ ಸಿ ವರೆಗೆ ಕಲಿತಿದ್ದಾರೆ.
ಬಾಲಕನಾಗಿದ್ದ ಮಂಜುನಾಥ ಶೆಟ್ಟಿ ಯೌವನಕ್ಕೆ ಕಾಲಿಡುವ ಹೊತ್ತಿಗೆ ಮಂಜಮ್ಮನಾಗಿ ಬದಲಾಗಿ ಹೆತ್ತವರಿಂದ ಮನೆಯಿಂದ ಹೊರಗೆ ದಬ್ಬಿಸಿಕೊಂಡು ಸಮಾಜದಲ್ಲಿ ಪಟ್ಟ ಪಾಡು, ಅವಮಾನ ಅಷ್ಟಿಷ್ಟಲ್ಲ..
1985ರಲ್ಲಿ ಜೋಗತಿ ದೀಕ್ಷೆ ತೆಗೆದುಕೊಂಡ ಬಳಿಕ 1986ರಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ದಿ.ಕಾಳವ್ವ ಜೋಗತಿ ಅವರ ಪರಿಚಯವಾದ ಬಳಿಕ ಬದುಕು ಬದಲಾಯಿತು.
ಜೋಗತಿ ಕಲಾವಿದೆಯಾಗಿ ತಮ್ಮನ್ನು ಗುರುತಿಸಿಕೊಂಡು ರಾಜ್ಯದಲ್ಲಿ ಗಮನ ಸೆಳೆದರು.
ಜಾನಪದ ಶೈಲಿಯ ಶ್ರೀ ರೇಣುಕಾ ಚರಿತ್ರೆ ನಾಟಕದಲ್ಲಿ ತಮ್ಮ ಗುರು ಕಾಳವ್ವ ಜೋಗತಿ ಅಭಿನಯಿಸುತ್ತಿದ್ದ ರೇಣುಕಾದೇವಿ ಪಾತ್ರ ಸೇರಿದಂತೆ ಹಲವು ಗಮನಾರ್ಹ ಪಾತ್ರಗಳಲ್ಲಿ ಮಿಂಚಿದ್ದಾರೆ.ಬಯಲಾಟ, ಜನಜಾಗೃತಿ ಮೂಡಿಸುವ ಬೀದಿನಾಟಕಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ.
ಆರೇಳು ವರ್ಷಗಳಿಂದ ರಂಗಭೂಮಿಯಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಮಂಜಮ್ಮ ಅವರು ಮೋಹಿನಿ ಭಸ್ಮಾಸುರ ನಾಟಕದ ಭಸ್ಮಾಸುರ, ಹೇಮರೆಡ್ಡಿ ಮಲ್ಲಮ್ಮನ ನಾಟಕದ ಮೋಹನ್ ಲಾಲಾ ಪಾತ್ರ ಸೇರಿದಂತೆ ಹಲವು ನಾಟಕಗಳಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರೆ.
ಮಂಜಮ್ಮ ಅವರು ಚಲನಚಿತ್ರ, ಕಿರುಚಿತ್ರಗಳಲ್ಲಿ ಅಭಿನಯಿಸಿರುವುದು ವಿಶೇಷ. ಇವರ ಕುರಿತು ವಾರ್ತಾ ಇಲಾಖೆ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದೆ.
ಡಿಡಿ ಚಂದನ ವಾಹಿನಿಯಲ್ಲಿ ಇವರ ಜೋಗತಿ ನೃತ್ಯ ಪ್ರಸಾರಗೊಂಡಿದೆ.
ಪ್ರಶಸ್ತಿಗಳ ಸುರಿಮಳೆ: ಮಂಜಮ್ಮ ಅವರ ಜೋಗತಿ ಕಲಾ ಪ್ರತಿಭೆಗೆ ಸರಕಾರ, ಸಂಘ ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. 2007ರಲ್ಲಿ ಕರ್ನಾಟಕ, ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2011ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಎಚ್.ಎಲ್.ನಾಗೇಗೌಡ ಪ್ರಶಸ್ತಿ, ಸಂದೇಶ ಕಲಾ ಪ್ರಶಸ್ತಿ, 2019ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳಿಗೆ ಲಭಿಸಿವೆ.
ಇತ್ತೀಚೆಗಷ್ಟೆ ಸಂಶೋಧಕ ಡಾ. ಅರುಣ್ ಜೋಳದ ಕೂಡ್ಲಿಗಿ ಅವರು ಮಂಜಮ್ಮ ಜೋಗತಿ ಆತ್ಮಕಥನವನ್ನು ನಿರೂಪಿಸಿದ್ದಾರೆ. ಚನ್ನಪಟ್ಟಣದ ಪಲ್ಲವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಕೇಂದ್ರ ಸರ್ಕಾರ ತೃತೀಯ ಲಿಂಗಿಯಾಗಿರುವ ಮಂಜಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸುವ ಮೂಲಕ ಮಂಗಳಮುಖಿ ಸಮುದಾಯಕ್ಕೆ ಗೌರವ ನೀಡಿರುವುದು ಅಭಿನಂದನಾರ್ಹ.