ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ 30ಸಾವಿರ ಆಕ್ಷೇಪಣೆಗಳು ಬಂದಿದ್ದು;ಅವುಗಳನ್ನು ಪರಿಶೀಲಿಸಿ ಜಿಲ್ಲೆ ರಚನೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಗಳು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಕೊಡುವುದು ಬೇಡ ಅಂದಿದ್ದಾರೆ;ಪ್ರತಿಕ್ರಿಯೆ ನೀಡಲ್ಲ. ಜ.28ರಿಂದ ಅಧಿವೇಶನ ಆರಂಭವಾಗಲಿದ್ದು,ಸಹಜವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ಹೇಳಿದ ಸಚಿವ ಆನಂದಸಿಂಗ್ ಅವರು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಮಾಧ್ಯಮದವರು ಪದೇಪದೆ ಕೇಳಿದ ಪ್ರಶ್ನೆಗೆ ನೋ ರಿಯಾಕ್ಷನ್ ಒನ್ಲಿ ಆ್ಯಕ್ಷನ್ ಎಂದರು.
ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದೆ.ಸಂಕಷ್ಟದ ಸಂದರ್ಭದಲ್ಲಿ ಡಿಎಂಎಫ್ ಅನುದಾನ ನೆರವಾಗಿದೆ ಎಂದು ಹೇಳಿದ ಸಚಿವ ಆನಂದಸಿಂಗ್ ಅವರು ಡಿಎಂಎಫ್ ಅನುದಾನ ಬಳಸಿಕೊಂಡು ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕಚೇರಿ ಬಳ್ಳಾರಿಯಲ್ಲಿ ಅರಂಭಿಸುವುದಕ್ಕೆ ಕ್ರಮವಹಿಸಲಾಗುವುದು ಎಂದು ಅವರು ವಿವರಿಸಿದರು.
ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆದವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗಿಲ್ಲ. ಜಿಲ್ಲೆಯಲ್ಲಿ ನೋಂದಣಿಯಾದ 20ಸಾವಿರ ಆರೋಗ್ಯ ಸಿಬ್ಬಂದಿಯಲ್ಲಿ ಅಂದಾಜು 7ಸಾವಿರ ಜನರು ಇದುವರೆಗೆ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂಳಿದವರು ಇನ್ನೂ ಕೆಲದಿನಗಳಲ್ಲಿ ಪಡೆದುಕೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸದ ದೇವಿಂದ್ರಪ್ಪ, ಶಾಸಕ ಬಿ. ನಾಗೇಂದ್ರ, ಡಿಸಿ ಪವನಕುಮಾರ್ ಮಾಲಪಾಟಿ, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅಡಾವತ್, ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹೆಚ್. ಹನುಮಂತಪ್ಪ ಮತ್ತಿತರರು ಇದ್ದರು.