ಬಳ್ಳಾರಿ: ಅಸಾಧ್ಯವೆಂದು ಭಾವಿಸುವ ಯಾವುದೇ ಕಾರ್ಯವನ್ನು ಶಿಕ್ಷಣದಿಂದ ಸಾಧಿಸಬಹುದು ಎಂದು ಬಳ್ಳಾರಿ ವಲಯದ ಐಜಿಪಿ, ಸಾಹಿತಿ, ಭಾಷಾತಜ್ಞ ಎಂ.ನಂಜುಂಡಸ್ವಾಮಿ(ಮನಂ) ಅವರು ಹೇಳಿದರು.
ನಗರದ ಕೌಲ್ ಬಜಾರ್ ಮುಖ್ಯ ರಸ್ತೆಯಲ್ಲಿರುವ ರೇಯ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಜರುಗಿದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ರಿಜಿನಲ್ ಮ್ಯಾನೇಜರ್, ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ “ದಣಿವರಿಯದ ಪಯಣ” ಅನುಭವ ಕಥನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಿಲುಕಲಾರದ ನಕ್ಷತ್ರಗಳನ್ನು ಆಕಾಶದಿಂದ ಭೂಮಿಗೆ ಇಳಿಸುವ ಶಕ್ತಿ ಶಿಕ್ಷಣಕ್ಕಿದೆ ಎಂದು ಬಣ್ಣಿಸಿದ ಮನಂ ಅವರು ಕಡುಬಡತನ, ಜಾತಿಯ ಅಪಮಾನಗಳನ್ನು ಲೆಕ್ಕಿಸಿದೇ ಡಾ. ವೆಂಕಟಯ್ಯ ಅಪ್ಪಗೆರೆ ಅವರು ವಿದ್ಯೆ ಎಂಬ ಶಕ್ತಿ ಇಂದ ಜೀವನದಲ್ಲಿ ಅಸಾಧ್ಯವಾದದ್ದನ್ನು ಸಾಧಿಸಿದ್ದಾರೆ ಎಂದರು.
ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಕೆಲಸ, ವಿಚಾರಗಳಿಂದ ಜನರ ಮನಸ್ಸು ತಟ್ಟುವ ರೀತಿಯಲ್ಲಿ ಬದುಕಬೇಕು. ಇಂತಹ ಜೀವನ ನಡೆಸಿ ತಮ್ಮ ದಟ್ಟ ಅನುಭವಗಳನ್ನು ದಾಖಲಿಸಿದ
ಡಾ. ಅಪ್ಪಗೆರೆ ಅವರ ದಣಿವರಿಯದ ಪಯಣ ಕೃತಿ ನನ್ನ ಇಷ್ಟದ ಕೆಲವೇ ಕೆಲವು ಪುಸ್ತಕಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಿದರು.
ಅಲಂಕಾರ ತುಂಬಿದ ಬರವಣಿಗೆಗಿಂತ ನಗ್ನ ಸತ್ಯದಿಂದ ಕೂಡಿದ ಬರಹಗಳೇ ಶಕ್ತಿಪೂರ್ಣ ಎಂದು ಪ್ರತಿಪಾದಿಸಿದ ಮನಂ ಅವರು ಪ್ರಸಿದ್ಧ ಪತ್ರಕರ್ತ ಖುಷ್ವಂತ್ ಸಿಂಗ್, ಹೆಸರಾಂತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಉದಾಹರಿಸಿದರು.
ಕೃತಿಯಲ್ಲಿ ಅಣುಕಿಹಾಕಿ ನೋಡುವ ಚಿತ್ರಣಗಳಿಲ್ಲ. ಜೀವನದಲ್ಲಿ ಸ್ವಂತ ತಾವು ಅನುಭವಿಸಿದ ಎಲ್ಲವನ್ನೂ ದಣಿವರಿಯದ ಪಯಣದಲ್ಲಿ ದಾಖಲಿಸಿದ್ದಾರೆ ಎಂದು ಹೇಳಿದರು.
ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ತಮ್ಮ ವಿದ್ವತ್, ಪ್ರತಿಭೆ, ಜನಪರ ವಿಚಾರಗಳು, ಧ್ಯೇಯೋದ್ದೇಶಗಳಿಂದ ವಿಶ್ವಮಾನ್ಯರಾಗಿದ್ದಾರೆ. ಬಾಬಾಸಾಹೇಬರ ಕುರಿತು ವರ್ಷಾನುಗಟ್ಟಲೇ ಮಾತನಾಡಬಹುದು. ಚರ್ಚಿಸಬಹುದು. ತಮ್ಮ ಜೀವಿತಾವಧಿಯಲ್ಲಿ ಹತ್ತಾರು ಶ್ರೇಷ್ಠ ಪುಸ್ತಕಗಳನ್ನು ಪ್ರಕಟಮಾಡಿದ ಮಹಾನ್ ಪ್ರತಿಭೆ ಎಂದು ಕೊಂಡಾಡಿದರು.
ಕೃತಿ ಪರಿಚಯಿಸಿದ ಪ್ರಜಾವಾಣಿ ಮುಖ್ಯ ವರದಿಗಾರ ಕೆ.ನರಸಿಂಹಮೂರ್ತಿ ಅವರು, ಅರವತ್ತೆಂಟರ ಹರೆಯದ ಡಾ. ಅಪ್ಪಗೆರೆ ಅವರಲ್ಲಿ ಈಗಲೂ ಒಬ್ಬ ತುಂಟ ಹುಡುಗ ನಿದ್ದಾನೆ. ಇವರ ಕ್ರೀಡಾ ಉತ್ಸಾಹ, ಅಭಿರುಚಿ,ಹವ್ಯಾಸಗಳು,ಆಶಾಭಾವನೆ ಇತರರಿಗೆ ಮಾದರಿ ಎಂದು ಹೇಳಿದರು.
ಮುಖ್ಯ ಅತಿಥಿ ಹಿರಿಯ ಪ್ರಕಾಶಕ, ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅವರು ಮಾತನಾಡಿ, ಬ್ಯಾಂಕ್ ಉದ್ಯೋಗಿಗಳು ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಾರೆ. ವಯೋ ನಿವೃತ್ತಿ ವೇಳೆಗೆ ಹೆಚ್ಚಿನ ಉದ್ಯೋಗಿಗಳು ಅನಾರೋಗ್ಯ ಪೀಡಿತರಾಗುತ್ತಾರೆ ಎಂದು ವಿಷಾಧಿಸಿದರು.
ಮನುಷ್ಯ ವೈರುದ್ಯಗಳ ನಡುವೆ ಬದುಕುತ್ತಾನೆ. ಬದುಕೇ ಒಂದು ಹೋರಾಟ. ಹೋರಾಟ ವಿಫಲವಾಗಿದೆ ಎಂದು ಬಿಡುವಂತಿಲ್ಲ. ಅದೊಂದು ಪ್ರಕ್ರಿಯೆ ಎಂದು ವ್ಯಾಖ್ಯಾನಿಸಿದರು.
ಡಾ.ಅಪ್ಪಗೆರೆ ಅವರ ಕೃತಿ ಉತ್ತಮವಾಗಿದೆ. ಎಲ್ಲರೂ ಕೊಂಡು ಓದಿ ಲೇಖಕರು ಮತ್ತು ಪ್ರಕಾಶಕರನ್ನು ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಜಿಬಿ ಅಧ್ಯಕ್ಷ ಶ್ರೀನಾಥ್ ಜೋಷಿ ಅವರು ಮಾತನಾಡಿ ದೇಶದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕು ಮೊದಲ ಸ್ಥಾನ ಪಡೆಯಲು ಡಾ. ವೆಂಕಟಯ್ಯ ಅವರಂತಹ ಅಧಿಕಾರಿ, ಸಿಬ್ಬಂದಿಗಳ ನಿಸ್ವಾರ್ಥ ಭಾವನೆಯ ದಕ್ಷ ಸೇವೆಯೇ ಕಾರಣ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಕಾಶಕ ಸಿ.ಮಂಜುನಾಥ, ದಣಿವರಿಯದ ಪಯಣ ಸಂಸ್ಕೃತಿ ಪ್ರಕಾಶನದ 26 ನೇ ಕೃತಿ. ಡಾ. ಅಪ್ಪಗೆರೆ ಅವರ ಎರಡೂವರೆ ದಶಕಗಳ ಸಾಹಿತ್ಯ, ಸಂಸ್ಕೃತಿಯ ಒಡನಾಟದೊಂದಿಗೆ ಅವರ ಜತೆ ಹೆಜ್ಜೆ ಹಾಕಿದ ಸಂತೃಪ್ತಿ ತಮಗಿದೆ ಎಂದರು.
ಪ್ರಕಟಣಾ ಪೂರ್ವವೇ ಪುಸ್ತಕ ಖರೀದಿಸಿದ ಸಿ ಬಿ ಪುರದ, ಕೆಜಿಬಿ ನಿವೃತ್ತ ಹಿರಿಯ ಅಧಿಕಾರಿಗಳಾದ ಜನಾರ್ಧನ ರೆಡ್ಡಿ, ಗಾಳೆಪ್ಪ, ಬ್ಯಾಂಕಿನ ಪ.ಜಾ-ಪ.ವರ್ಗದ ನೌಕರರ ಸಂಘದ ಮುಖಂಡ ಚಂದ್ರಪ್ಪ ಮತ್ತಿತರರಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಯುವಜನ ಸೇವೆ, ಕ್ರೀಡೆ ಇಲಾಖೆಯ ವಿಶ್ರಾಂತ ಅಧಿಕಾರಿ ಮಲ್ಕಪ್ಪ ಮತ್ತು ಸಿ ಬಿ ಪುರದ ಅವರು ಕೃತಿಕಾರರನ್ನು ಸನ್ಮಾನಿಸಿದರು.
ಆಟೋ ಚಾಲಕ ನಾಗರಾಜ್ ಕಾಮ್ಲೇಕರ್ ಅವರು ಕೃತಿ ಖರೀದಿಸಿ ಗಮನ ಸೆಳೆದರು.
ಹಿರಿಯ ಸಾಹಿತಿ ಗಂಗಾಧರ ಪತ್ತಾರ್ ಅವರು ಡಾ. ಅಪ್ಪಗೆರೆ ಅವರ ಕುರಿತು ಬರೆದ ಕವಿತೆ ವಾಚಿಸಿದರು. ಗಂಗಣ್ಣ ಪತ್ತಾರ್, ಕೆ.ಬಿ ಸಿದ್ದಲಿಂಗಪ್ಪ ಅವರು ಗಣ್ಯ ಅತಿಥಿಗಳನ್ನು ಪರಿಚಯಿಸಿದರು.
ರಾಯಚೂರಿನ ಪತ್ರಕರ್ತ ಚನ್ನಬಸಪ್ಪ ಬಾಗಲವಾಡ, ನಿವತ್ತ ಪುರಸಭೆಯ ಅಧಿಕಾರಿ ಸಿ.ಯಮನಪ್ಪ, ಕವಯತ್ರಿ ಎನ್.ಡಿ ವೆಂಕಮ್ಮ, ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ನಿರ್ದೇಶಕಿ ಸರಸ್ವತಿ ಎನ್ ಅಪ್ಪಗೆರೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೂ ಗಳಲ್ಲಿ ಮುಚ್ಚಿಟ್ಟ ಪುಸ್ತಕಗಳನ್ನು ಕೊರವಂಜಿ ವೇಷಧಾರಿ ಕುಮಾರಿ ಕವನಶ್ರೀ ಪತ್ತಾರ ಹೊತ್ತುತಂದ ಬಿದಿರಿನ ಬುಟ್ಟಿಯಲ್ಲಿ ಹೊರತೆಗೆಯುವ ಮೂಲಕ ಲೋಕಾರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ಆಸ್ಪತ್ರೆಯ ತಜ್ಞವೈದ್ಯ ಡಾ. ಸುನೀಲ್ ಕುಮಾರ್ ಅವರು ಸ್ವಾಗತಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಮಂಜುನಾಥ್ ನಿರೂಪಿಸಿದರು. ರೇಯ್ಸ್ ಆಸ್ಪತ್ರೆಯ ವ್ಯವಸ್ಥಾಪಕ ಪಾಲುದಾರ ಟಿ. ಆರ್ ಕೃಷ್ಣಮೂರ್ತಿ ಅವರು ವಂದಿಸಿದರು.