ಬಳ್ಳಾರಿ:ರಾಜ್ಯ ಸರಕಾರವು ವಿವಿಧ ಜನಪರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು.
ಜಿಲ್ಲಾಡಳಿತ, ಗಣರಾಜ್ಯೋತ್ಸವ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ವಿಶಿಷ್ಟತೆಯನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿಯ ದಿಟ್ಟ ಹೆಜ್ಜೆಗಳನ್ನು ದಾಖಲಿಸುತ್ತಾ ನಮ್ಮ ಸರಕಾರ ಮುನ್ನಡೆಯುತ್ತಿದೆ ಎಂದರು.
2020-21ನೇ ಸಾಲಿನಲ್ಲಿ ಕೃಷಿ ಇಲಾಖೆಯು ಜಿಲ್ಲೆಯಲ್ಲಿ ಕೃಷಿ ಯಂತ್ರಗಳು ಹಾಗೂ ಪರಿಕರಗಳ ವಿತರಣೆಯಲ್ಲಿ ಒಟ್ಟು 4352 ರೈತರಿಗೆ 958.91 ಲಕ್ಷ ರೂ. ಅನುದಾನ ಸಹಾಯಧನವನ್ನು ನೀಡಲಾಗಿದೆ. ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ ರೈತರಿಗೆ ಹನಿ ನೀರಾವರಿ ಘಟಕ ಹಾಗೂ ತುಂತುರು ನೀರಾವರಿ ಘಟಕಗಳಡಿ ಒಟ್ಟು 6820 ಫಲಾನುಭವಿಗಳಿಗೆ ಆರ್ಥಿಕ 870.66 ಲಕ್ಷಗಳ ಸಹಾಯಧನ ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2020-21ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯ ಇಲ್ಲಿಯವರೆಗೆ ಭಾರತ ಸರ್ಕಾರದಿಂದ ಏಳನೇ ಕಂತಿನ ವರೆಗೆ ಒಟ್ಟು 1,97,134 ರೈತರಿಗೆ ರೂ. 228.81 ಕೋಟಿ ವರ್ಗಾವಣೆಯಾಗಿದೆ ಎಂದು ಅವರು ವಿವರಿಸಿದರು.
ಪ್ರಪಂಚದಲ್ಲಿಯೇ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶ ಪ್ರಜಾತಂತ್ರ ಗಣತಂತ್ರದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಇದಕ್ಕಾಗಿ ಭಾರತದ ಸಂವಿಧಾನ ಶಿಲ್ಪಿ, ಭಾರತರತ್ನ
ಡಾ: ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು ಎಂದು ಸಚಿವ ಆನಂದಸಿಂಗ್ ಹೇಳಿದರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ, ಅನೇಕ ಭಾಷೆಗಳನ್ನು ಮಾತನಾಡುವ ಜನರನ್ನು ಹಾಗೂ ವಿವಿಧ ಸಾಂಸ್ಕøತಿಕ ಹಿನ್ನಲೆಯನ್ನು ಹೊಂದಿರುವುದು ವೈಶಿಷ್ಟ್ಯವಾಗಿದೆ. ಸಂವಿಧಾನತ್ಮಕವಾಗಿ ನಮ್ಮ ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನಗಳು ರಾಷ್ಟ್ರದ ಅಸ್ತಿತ್ವ ಹಾಗೂ ಸಾರ್ವಭೌಮತ್ವವನ್ನು ಸಾರುತ್ತಿವೆ. ಈ ಹಿನ್ನಲೆಯಲ್ಲಿ ಇವುಗಳಿಗೆ ಗೌರವ ದೊರಕಿಸಿಕೊಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ,ಸೈಯದ್ ನಾಸೀರ್ ಹುಸೇನ್, ಶಾಸಕರಾದ ಕೆ.ಸಿ.ಕೊಂಡಯ್ಯ, ಸೋಮಶೇಖರರೆಡ್ಡಿ,ನಾಗೇಂದ್ರ,ಅಲ್ಲಂ ವೀರಭದ್ರಪ್ಪ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜನಾಥ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೊಟ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ,ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಮತ್ತಿತರರು ಇದ್ದರು.
ಹಕ್ಕು ಪತ್ರಗಳ ವಿತರಣೆ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯೋಧರಾದ ಕೂಡ್ಲಿಗಿ ತಾಲೂಕಿನ ಲೋಕಿಕೆರೆಯ ಶಕೀಲ್ ಭಾಷಾ, ಕುರುಗೋಡು ತಾಲೂಕಿನ ಸಿಂಧಿಗೇರಿಯ ಅಲ್ಫರ್ಡ್ ತ್ಯಾಗರಾಜ್ ಮತ್ತು ಸುಬೇದಾರ್ ಚೆನ್ನಪ್ಪ ಕ್ಸೇವಿಯರ್, ಕುರುಗೋಡು ತಾಲೂಕಿನ ಕೊಳೂರು ಗ್ರಾಮದ ಆರ್.ನಾಗರಾಜ್, ಶಿಡಿಗಿನಮೊಳದ ಕುಮಾರಸ್ವಾಮಿ ಜೆ., ಹೊಸಪೇಟೆ ತಾಲೂಕಿನ ಕಮಲಾಪುರದ ಐ.ವಿಜಯ್ ಕುಮಾರ್ ರೆಡ್ಡಿ ಮತ್ತು ಶಶಿಕುಮಾರ್, ಹೊಸಪೇಟೆ ತಾಲೂಕಿನ ನಂದಿಬಂಡೆಯ ಎಸ್.ವೆಂಕಟೇಶಲು, ಹಡಗಲಿ ತಾಲೂಕಿನ ಹೊಳಲು ಗ್ರಾಮದ ಎಂ.ಮುದುಕಪ್ಪ, ಸಿರುಗುಪ್ಪ ತಾಲೂಕಿನ ಹಳೇಕೋಟೆಯ ಶ್ರೀನಿವಾಸ್, ಹೆಚ್.ಬಿ.ಹಳ್ಳಿ ತಾಲೂಕಿನ ಹಸನಿ ಗ್ರಾಮದ ಎಂ.ಕೆ.ಸಯ್ಯದ್ ಅವರಿಗೆ ಸರಕಾರಿ ಜಮೀನು ಮಂಜೂರು ಮಾಡಿದ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ಸನ್ಮಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ 2020-21ನೇ ಸಾಲಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ.ಕೆ.ನಾಗರತ್ನ ಸುಯಜ್ಞ ಮತ್ತು ಸಮಾಜ ಸೇವೆಯ ಮೂಲಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಕೂಡ್ಲಿಗಿಯ ಶ್ರೀ ಊರಮ್ಮ ದೇವ ಟ್ರಸ್ಟ್ ಮಾಜಿ ದೇವದಾಸಿಯರು, 2020-21ನೇ ಸಾಲಿನಲ್ಲಿ ಸನ್ಮಾನ ಸ್ವೀಕರಿಸಿದ ಹಾವು ಹಾಗೂ ವನ್ಯಜೀವಿ ಸಂರಕ್ಷಕರಾದ ಬಳ್ಳಾರಿಯ ಸಮೀರ್ ಶೇಟ್, 2019-20ನೇ ಸಾಲಿನಲ್ಲಿ ವಿಶೇಷ ಚೇತನ ಮಕ್ಕಳ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಆಕಾಶ್ ಮತ್ತು ರಾಜ್ಯ ಮಟ್ಟದ 18 ವರ್ಷದ ಮಹಿಳೆಯರ ಗುಂಡು ಎಸೆತದಲ್ಲಿ ಬಂಗಾರದ ಪದಕ ಪಡೆದ ಕೀರ್ತಿ ಪಿ. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
*****