ಅನುದಿನ ಕವನ-೨೮ (ಪ್ರಸಿದ್ಧ ಕವಿ ಕೆ ಎಸ್ ನರಸಿಂಹಸ್ವಾಮಿ)

ಜ. 26 ಪ್ರಸಿದ್ಧ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ಹುಟ್ಟಿದ ದಿನ. ಮೈಸೂರು ಮಲ್ಲಿಗೆ ಖ್ಯಾತಿಯ ಕೆ ಎಸ್ ನ ಅವರ ಜನಪ್ರಿಯ “ನಿನ್ನ ಪ್ರೀತಿಗೆ” ಪದ್ಯವನ್ನು ಪ್ರಕಟಿಸುವ ಮೂಲಕ ಅವರಿಗೆ ಗೌರವ ನಮನಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಸಲ್ಲಿಸುತ್ತಿದೆ.
(ಸಂಪಾದಕರು)👇

ನಿನ್ನ ಪ್ರೀತಿಗೆ

ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?
ಹೊನ್ನ ಚಂದಿರ, ನೀಲಿ ತಾರೆಗೆ
ಹೊಂದಲಾರದ ಹೋಲಿಕೆ.

ನಿನ್ನ ಪ್ರೀತಿಗೆ, ಅದರ ರೀತಿಗೆ
ಚೆಲುವು ಕನಸಿನ ಜವನಿಕೆ ;
ಬೆಳ್ಳಿನಿದ್ದೆಯ ತುಟಿಗಳಂಚಿಗೆ
ಸುಳಿದ ಕಿರುನಗೆ ತೋರಿಕೆ.

ತುಂಬಿ ಕೊರೆದಿಹ ಹೂವಿನೆದೆಯಲಿ
ನೋವು ಗಾಳಿಗೆ ಹಾಸಿಗೆ ;
ಜೇನು ಜೀವದ ನೆಳಲ ಪೊದೆಯಲಿ
ಗೂಡುಕಟ್ಟಿದೆ ಆಸೆಗೆ.

ತಂತಿಯಾಚೆಗೆ ವೀಣೆ ಮಿಂಚಿದೆ
ಬೆಂಕಿಬೆರಳಿನ ಹಾಡಿಗೆ ;
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ
ಚಿಂತೆಯಾಳುವ ಕಾಡಿಗೆ.

ನಗುವ ಮುಖಗಳ ನೋಡಿಬಂದೆನು
ಹಾದಿ ಬೀದಿಯ ಕೆಲದಲಿ ;
ನಗದ ಒಂದೇ ಮುಖವ ಕಂಡೆನು
ನನ್ನ ಮನೆಯಂಗಳದಲಿ.

ನೂರು ಕನ್ನಡಿಗಳಲಿ ಕಂಡೆನು
ನೋಡಬಾರದ ಮುಖವನು ;
ಇಳಿದ ಮುಖದಿಂಗಿತವನರಿತೆನು
ಅಸುಖ ಮುದ್ರಿತ ಸುಖವನು.

ನಗದ ಮುಖದಲಿ ನಿನ್ನ ಕಂಡೆನು
ತಿಳಿದ ಬಾನಿನ ಹರಹನು,
ಮೊದಲ ಮೋಹದ ಮಂಜು ಕದಲಲು
ಬದುಕು ತುಂಬಿದ ಹಗಲನು.

ನಿನ್ನ ಪ್ರೀತಿಗೆ, ಅದರ ರೀತೆಗೆ
ನೀಡಬಲ್ಲೆನೆ ಕಾಣಿಕೆ ?
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರೀತಿಯೆ ಹೋಲಿಕೆ.
*****