ಅನುದಿನ ಕವನ-೩೦ (ಡಾ.ವಡ್ಡಗೆರೆ ನಾಗರಾಜಯ್ಯ)

ಡಾ. ವಡ್ಡಗೆರೆ ನಾಗರಾಜಯ್ಯ….
ನಾಡು ಕಂಡ ಪ್ರಗತಿಪರ ಹೋರಾಟಗಾರರಲ್ಲಿ ಒಬ್ಬರು. ಸಂಘಟಕ, ಸಂಸ್ಕೃತಿ ಪರ ಚಿಂತಕ, ಕವಿ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದವರು. ದಲಿತ ಸಂಘರ್ಷ ಸಮಿತಿಯ ಮೂಲ ಕಾರ್ಯಕರ್ತ ಮತ್ತು ಈಗಲೂ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಇವರು ಸದ್ಗುಣ ಸಂಪನ್ನರು, ವಿದ್ಯಾವಂತ ವಿನಯಶೀಲ ಬುದ್ದಿಜೀವಿಗಳು.

ಹಂಪಿ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ಪಡೆದ ಇವರು ಕೊರಟಗೆರೆ ತಾಲೂಕಿನಲ್ಲಿಯೇ ಪ್ರಥಮರಾಗಿ ಇಂಗ್ಲಿಷ್ ಲಿಟ್ರೇಚರ್ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪ್ರಸ್ತುತ ಬೆಂಗಳೂರು ಸಮೀಪದ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಸಹ ಪ್ರಾಧ್ಯಾಪಕರಾಗಿದ್ದಾರೆ.
ಜನಪರ ಹೋರಾಟಗಳಲ್ಲಿ ಹಾಗೂ ಅಲೆಮಾರಿಗಳ ಸಬಲೀಕರಣಕ್ಕಾಗಿ ಇಡೀ ಕರ್ನಾಟವನ್ನೆ ಸುತ್ತುತ್ತಿದ್ದಾರೆ.
ಸಾಹಿತ್ಯ, ಕಲೆ, ಹೋರಾಟ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಡಾ. ವಡ್ಡಗೆರೆ ಅವರು ತಮ್ಮ ಹಾಗೆಯೇ ಇತರರನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತಾ ಬಂದಿದ್ದಾರೆ. ಸರಕಾರ ಕರ್ನಾಟಕ_ಸಾಹಿತ್ಯ_ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿತ್ತು. . 200೦ರಲ್ಲಿ ತಮ್ಮ ಮೊದಲ “ಆಸಾದಿ” ಖಂಡಕಾವ್ಯ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ಇವರ ಅನೇಕ ಪುಸ್ತಕಗಳು ಮತ್ತು ಕವಿತೆಗಳು ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿರುತ್ತವೆ. ಹೊರರಾಜ್ಯಗಳಲ್ಲಿಯೂ ಇವರ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸಂಪನ್ಮೂಲ ವ್ಯಕ್ತಿಯನ್ನಾಗಿ ಆಹ್ವಾನಿಸಿ ಗೌರವಿಸುತ್ತಿವೆ.

ಇಂದಿನ ‘ ಅನುದಿನ ಕವನ’ದ ಗೌರವಕ್ಕೆ ಡಾ. ವಡ್ಡಗೆರೆ ನಾಗರಾಜಯ್ಯ ಅವರ ‘ಅರಗಿಣಿಯ ಹಸಿರು ಪ್ರೀತಿಯ ಹಾಡು’ ಪಾತ್ರವಾಗಿದೆ.👇

ಅರಗಿಣಿಯ ಹಸಿರು ಪ್ರೀತಿಯ ಹಾಡು
———————-

ಅರಗಿಣಿಯು ಹಣ್ಣು ಕೊರಕಿ ತಿನ್ನುವುದನ್ನು ನಾನು ನೋಡಿದ್ದೇನೆ;
ಪೂರ್ಣ ಹಣ್ಣನ್ನು ಇಡಿಯಾಗಿ ತಿಂದಿರುವುದನ್ನು ನಾನಂತೂ ನೋಡಿಲ್ಲ
ಗಿಣಿಯು ಕಚ್ಚಿಬಿಟ್ಟ ಸೀಬೆಹಣ್ಣನ್ನು ನಾನು ಪೂರ್ಣ ತಿಂದಿದ್ದೇನೆ
ಅದು ಕಚ್ಚಿದ ಮಾವಿನ ವಾಟೆ ರಸವನ್ನೂ ಗೋರಿಕೊಂಡು ಸವಿದಿದ್ದೇನೆ
ಗಿಣಿ ಕಚ್ಚಿದ ಹಣ್ಣು ಬಲು ರುಚಿ ಎಂದು ಚಪ್ಪರಿಸಿ ಅನುಭವಿಸಿದ್ದೇನೆ!

ಅರಗಿಣಿ ಹಾರಿದಷ್ಟು ಆಕಾಶದ ಅಗಲ ನೋಡುತ್ತದೆ ಬಗೆಬಗೆಯ
ಹಣ್ಣುಗಳನ್ನು, ಸೀಮೆ ವಿಸ್ತಾರಗಳನ್ನು ಅಳೆದು ಸವಿಯುತ್ತದೆ
ಸೌಂದರ್ಯರಾಶಿ ನೋಟದ ಆಯತದಲ್ಲಿ,
ಮಾವು ನೇರಲ ಪೇರಲ ಸೀತಾಫಲ ಬೋರೆ ಬಿಕ್ಕೆ ಹೀಗೆ
ಹಲ ಬಗೆಯ ಹಣ್ಣುಗಳನ್ನು ಕೆಂಪು ಕೊಕ್ಕಿನಲ್ಲಿ ಅರೆಕೊರೆಯಾಗಿ
ಕುಕ್ಕಿ ಕೊರಕಿ ಕಚ್ಚಿ ತಿಂದು ಮತ್ತೆ ಹಾರುತ್ತದೆ
ಹಣ್ಣಿನ ಮರಗಳ ಹುಡುಕಿ ಹೊಸ ಹಣ್ಣಿನ ರುಚಿ ಉಂಬಲು!

ಜೀವಮಂಡಲದ ಬಿತ್ತನೆ ಬೀಜ ಒಡಲೊಳಗೆ ತುಂಬಿಕೊಂಡು
ಹಾರುವ ಅರಗಿಣಿಗೆ ಬೀಜಪ್ರೀತಿಯ ಹಸಿರಿನದ್ದೇ ಧ್ಯಾನ,
ನೆಲದ ಮೇಲೆ ಹಿಕ್ಕೆ ಉದುರಿಸಿದಲ್ಲಿ ಬೀಜಪ್ರೀತಿ ಮೊಳೆಯುತ್ತದೆ,
ಟಿಸಿಲೊಡೆದು ಕೊಂಬೆ ರೆಂಬೆ ಚಾಚಿ ಹೂಕಾಯ್ದು
ಹಣ್ಣುಗಳು ಜಗಿಯುತ್ತವೆ ಗಿಣಿಹಸಿರು ಧರಣಿ ಮಂಡಲದೊಳಗೆ
ಹಸಿರು ಉಸಿರಿನ ಧ್ಯಾನ ಜೀವಪ್ರೀತಿಯ ಪುಳಕ!

ಹಸಿರು, ಉಸಿರು, ಬದುಕು, ಬೀಜ ಪ್ರೀತಿ, ಜೀವ ಪ್ರೀತಿಯನು
ಧರಣಿಮಂಡಲದೊಟ್ಟಿಗೆ ಬೆಸೆವ ಅರಗಿಣಿಯ
ಸೃಷ್ಟಿಕಲಾ ಕಸೂತಿ ಯಾರು ಬಿಗಿದ ಕಂಕಣ?!

ಓ ಕೆಂಪು ಕೊಕ್ಕಿನ ಅರಗಿಣಿಯೇ ಹಾಡುತ್ತಿರು ಸ್ವಚ್ಛಂದವಾಗಿ
ಜೀವಮಂಡಲದ ಹಸಿರು ಪ್ರೀತಿಯ ಉಸಿರುಗೋಳದಲ್ಲಿ
ಹಾರುತ್ತಿರು ಧರಣಿ ಮಂಡಲದ ಜೀವಪ್ರೀತಿ ಬೀಜಪ್ರೀತಿ ಫಲದೂಗುವ
ಹಣ್ಣಿನ ಮರಗಳ ಹುಡುಕಿ ಹೊಸ ಹಣ್ಣಿನ ರುಚಿ ಉಂಬಲು!

ಇದು ಪಂಜರದಲ್ಲಿ ಕೂಡಿಹಾಕಿದ ಗಿಣಿರಾಮನಲ್ಲ;
ಜೀವಪ್ರೀತಿ ಬೀಜಪ್ರೀತಿ ಹಸಿರು ಪ್ರೀತಿಯ ಅರಗಿಣಿ!
ಪಂಜರದ ಗಿಣಿರಾಮನಿಗೆ ರಾಜಕುಮಾರಿಯ ಎದೆನಾದ ಕೇಳಿಸುವುದಿಲ್ಲ
ಆದರೂ ಪಂಜರದ ಗಿಣಿರಾಮನನ್ನು ರಾಜಕುಮಾರಿ ಅನಂತವಾಗಿ ಪ್ರೀತಿಸುತ್ತಾಳೆ!

ಅರಮನೆಯ ರಾಜಕುಮಾರಿ ಅವಳು ಏಳು ಸುತ್ತಿನ ಕೋಟೆ
ಏಳು ಎಸಳಿನ ನಾಗವಾಸ ಲಾಳವಂಡಿ ಬೀಗಮುದ್ರೆಯ ಅಂತಃಪುರಕೆ
ಏಳು ಮಂದಿ ಕಾವಲು ಭಟರ ಗೋಳುಸುರಿನ ಪಹರೆ!
ಸುಕುಮಾರಿ ಸುಂದರಾಂಗಿಯಾದ ಅವಳಿಗೆ ಅರಮನೆಯೇ ಸೆರೆಮನೆಯಾಗಿ
ಪಂಜರದ ಗಿಣಿರಾಮನನ್ನು ಎದೆಗೆ ಹತ್ತಿರವೆಂದು ಭಾವಿಸಿ ಮಾತನಾಡುತ್ತಾಳೆ
ಅಂಗೈನಲ್ಲಿ ಅಣುಜೀವದ ದೀಪದ ಬೆಳಕೊಡ್ಡಿ ಮೈದಡವುತ್ತಾಳೆ
ನೇವರಿಸಿ ಮುದ್ದಿಸುತ್ತಾಳೆ, ಪ್ರೇಮಿಸಲು ಮನುಷ್ಯನೇ ಬೇಕೆಂಬ
ನಿಯಮವಿಲ್ಲ ಅವಳಿಗೆ! ಎದೆಯ ಭಾವನೆಗಳ ವ್ಯಕ್ತಮಾಡಲು
ಬೆಕ್ಕು ನಾಯಿ ನವಿಲು ಜಿಂಕೆ ಹಸುಕರು ಮರ ಗಿಡಬಳ್ಳಿಗಳಿಗೆ ಬರವಿಲ್ಲ ಅರಮನೆಯಲ್ಲಿ, ನಂದನವನದಲ್ಲಿ.

ಪ್ರೀತಿಸುವ ಜೀವಗಳು ಎಷ್ಟಿದ್ದರೇನಂತೆ ಅವಳೆದೆಯ ಮಾತಿಗೆ
ಪ್ರತಿಯುಲಿಯುವ ಗಿಣಿರಾಮನೆಂದರೆ ಅವಳಿಗೆ ಪ್ರಾಣಕಿಂತಲೂ ಮಿಗಿಲು!
ಅವಳ ಅಂಗೈನಲ್ಲಿ ಗಿಣಿರಾಮ ಹಾಡುವುದೊಂದೇ ಬಿಡುಗಡೆಯ ಹಾಡು;
“ಜೀವಪ್ರೀತಿ ಬೀಜಪ್ರೀತಿ ಹಸಿರು ಪ್ರೀತಿಯ ಅರಗಿಣಿ ನಾನಾಗಬೇಕು
ಬಾನ ಬಟ್ಟೆಯ ಅಗಲ ರೆಕ್ಕೆ ಬಿಚ್ಚಿ ಹಾರಬೇಕು ಫಲದೂಗುವ
ಹಣ್ಣಿನ ಮರಗಳ ಹುಡುಕಿ ಹೊಸ ಹಣ್ಣಿನ ರುಚಿ ಉಂಡು ಉಲಿಯಬೇಕು!”

-ಡಾ.ವಡ್ಡಗೆರೆ ನಾಗರಾಜಯ್ಯ
ಬೆಂಗಳೂರು
ಮೊಬೈಲ್: 8722724174