ಶಬ್ದ ಗಾರುಡಿಗ ದ.ರಾ ಬೇಂದ್ರೆ ಅವರಿಗೆ ನಮನ

ಜ.31, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಪದಪ್ರಯೋಗ ಪ್ರವೀಣ, ವರಕವಿ, ಗ್ರಾಮ್ಯ ಸೊಗಡಿನ ಮಹಾತೇರು,ಶಬ್ಧಗಾರುಡಿಗ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನ.
ಜೀವನದಲ್ಲಿ ಬೆಂದ್ರೆ ಆಗುವೇ ನೀ ಬೇಂದ್ರೆ.ಎಂಬ ಮಾತನ್ನು ನೆನೆಯುತ್ತಾ ಬೇಂದ್ರೆ ಬರಹಗಳು ಮನೆಮನ ಬೆಳಗಲಿ ಎಂದು ಆಶಿಸುತ್ತಾರೆ ದೇವದುರ್ಗ ಸರಕಾರಿ ಹಿರಿಯ ಪ್ರೌಢಶಾಲೆಯ ಮುಖ್ಯಗುರು ಯಲ್ಲಪ್ಪ ಹಂದ್ರಾಳ್ ಅವರು.
ವಿದ್ಯಾರ್ಥಿ-“ಸಾರ್ ಕನ್ನಡ ಸಾಹಿತ್ಯ ಅಂತ ಹೇಳೋವಾಗ ಮರೆಯದೆ ಕುವೆಂಪು ಮತ್ತು ಬೇಂದ್ರೆಯವರನ್ನು ಮೊದಲು ನೆನೆಯುತ್ತೀರಿ. ಅವರಿಬ್ಬರ ಬಗ್ಗೆ ಸಾಕಷ್ಟು ಹೇಳುತ್ತೀರಿ. ಆದರೆ ಬೇಂದ್ರೆಯಜ್ಜನಿಗ್ಯಾಕೆ ‘ರಾಷ್ಟ್ರಕವಿ’ ಅಂತ ಕರೀಲಿಲ್ಲ” ಅಂತ ಹದಿಮೂರು ವರ್ಷಗಳ ಹಿಂದೆ ‘ಕುರುಡುಕಾಂಚಾಣ’ ಕವನ ಪದ್ಯ ಭೋಧನೆಯ ನಂತರ ಕೇಳಿಬಿಟ್ಟ.
ನಾನು-“ಅದಕ್ಕೆ ನೀವೇ ಕಾರಣ”ಅಂತ ಅಂದುಬಿಟ್ಟೆ. ವಿದ್ಯಾರ್ಥಿ-“ಸಾರ್ ಅದು ಹೇಗೆ ನಾವು ಕಾರಣ ಸಾರ್? ನಾವು ಅವಾಗ ಇನ್ನೂ ಹುಟ್ಟಿದ್ದೇ ಇಲ್ಲ”. ಅಂದ ಒಬ್ಬ.
ನಾನು-“ನೀವು ಅಂದ್ರೆ ನೀವಾ ಅಲ್ಲ.ನೀವು ಅಂದ್ರೆ ಈ ಭಾಗದ ಜನ. ಅಂದ್ರೆ ಉತ್ತರ ಕರ್ನಾಟಕ ಜನ”.
ಮಗು-“ಸಾರ್ ಅದ್ಹೇಗೆ ಈ ಕಡೆ ಜನ ಕಾರಣ.ಹೇಳಿ ಎಂದರು.
ನಾನು_ “ಅಂದ್ರೆ ಕಲೆ-ಸಾಹಿತ್ಯ ಪರಂಪರೆಯನ್ನು ಗೌರವಿಸುವುದು ಸಾಮಾನ್ಯ ಜನರಾದರೂ ಅದಕ್ಕೆ ಇನ್ನಷ್ಟು ಮೆರಗನ್ನು,ಹಿರಿಮೆಯನ್ನು ಆಳುವ ಪ್ರಭುಗಳು ಅಂದ್ರೆ ರಾಜಕಾರಣಿಗಳು ಕೊಡಬೇಕು.ಸರ್ಕಾರದಲ್ಲಿ ಈ ವಿಷಯದ ಪ್ರಜ್ಞೆಯುಳ್ಳವರಿದ್ದರೆ ಸಾಧಕರನ್ನು ಗುರುತಿಸಿ ಗೌರವಿಸುತ್ತಾರೆ.ಅದರ ಅರಿವಿಲ್ಲದವರು ಆ ಕ್ಷೇತ್ರವನ್ನು ಮರೆತುಬಿಟ್ಟಿರುತ್ತಾರೆ. ಆ ಕಡೆ ಭಾಗದವರು ಅಲ್ಲಿಯವರನ್ನು ಗೌರವಿಸಿದಂತೆ ಇಲ್ಲಿಯವರನ್ನು ಗೌರವಿಸರು. ಈ ಮಾತು ಎಲ್ಲಾ ಕ್ಷೇತ್ರಕ್ಕೂ ಸಲ್ಲುತ್ತದೆ. ಈ ಭಾಗದವರು ಮುಖ್ಯಮಂತ್ರಿಯಾಗಿದ್ದಾಗ ಸಮೀತಿಯನ್ನು ರಚಿಸಿ ಬೇಂದ್ರೆಯವರಿಗೂ ‘ರಾಷ್ಟ್ರಕವಿ’ ಅಂತ ಗೌರವಿಸಬೇಕಿತ್ತು. ಆದರೆ ಅದಾಗಲಿಲ್ಲ.ತಿಳೀತಾ?”ಎಂದೆ.
ವಿದ್ಯಾರ್ಥಿಗಳು ಚಿಂತನೆಗೆ ಒಳಗಾದರು.ಅವರಿಗೆ ತಮ್ಮ ನಾಯಕರ ಬಗ್ಗೆ ಸಿಟ್ಟು ಬಂದಿರಬೇಕು.ಮ್ಲಾನರಾದರು.

-ಯಲ್ಲಪ್ಪ ಹಂದ್ರಾಳ್, ದೇವದುರ್ಗ