ಮಾಧ್ಯಮ ಲೋಕ
ಕರ್ನಾಟಕ ಕಹಳೆ ಡಾಟ್ ಕಾಮ್ ಇಂದಿನಿಂದ(ಫೆ.1) ಹೊಸ ಅಂಕಣ “ಮಾಧ್ಯಮ ಲೋಕ” ವನ್ನು ನಮ್ಮ ಪ್ರೀತಿಯ ಓದುಗ ದೊರೆಗಳಿಗಾಗಿ ಪ್ರೀತಿಯಿಂದ ಆರಂಭಿಸುತ್ತಿದೆ.
ಹಿರಿಯ ಲೇಖಕ, ಮಾಧ್ಯಮ ವಿಶ್ಲೇಷಕ ಹಾಗೂ ಹಿರಿಯ ಹವ್ಯಾಸಿ ಅಭಿವೃದ್ಧಿ ಪತ್ರಕರ್ತ ಮೈಸೂರಿನ ಡಾ. ಅಮ್ಮಸಂದ್ರ ಸುರೇಶ್ ಅವರು ಪ್ರತಿ ಸೋಮವಾರ ಮಾಧ್ಯಮ ಲೋಕ ಅಂಕಣಕ್ಕೆ ಬರೆಯುತ್ತಾರೆ.
ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರೂ ಇವರಿಗೆ ಬರಹಗಳೆಂದರೆ ಪಂಚಪ್ರಾಣ. ಈಗಾಗಲೇ ತಮ್ಮ ಸಮಾಜಮುಖಿ ಬರಹಗಳಿಂದ ಲಕ್ಷಾಂತರ ಓದುಗರಿಗೆ ಪರಿಚಿತರಾಗಿರುವ ಡಾ. ಅಮ್ಮಸಂದ್ರ ಸುರೇಶ್ ಅವರು ಹೊಸ ವಿಷಯಗಳನ್ನು ಅತ್ಯಂತ ಸರಳವಾಗಿ ಮನಮುಟ್ಟುವಂತೆ ಅರ್ಥೈಸಬಲ್ಲ ನಿಪುಣರು.
ಬೆಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೈಸೂರು ವಿವಿಯ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಹಿರಿಯ ಪ್ರಾಧ್ಯಪಕಿ ಫ್ರೊ. ಎನ್ ಉಷಾರಾಣಿ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿ ಪಡೆದ ಹೆಗ್ಗಳಿಕೆ ಇವರದು.
ಇತ್ತೀಚೆಗೆ ಪ್ರಕಟವಾದ ‘ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ’ ಮತ್ತು ‘ಕೊರೋನ ತಂದ ಅನಿವಾರ್ಯತೆಗಳು’ ಕೃತಿಗಳು ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ.
*****
“ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿ ಗೋಪ್ಯತೆ”ಯನ್ನು ಕದಿಯುತ್ತಿರುವ ಕುರಿತು ಈ ವಾರ ಡಾ. ಅಮ್ಮಸಂದ್ರ ಸುರೇಶ್ ಅವರು ಚರ್ಚಿಸಿದ್ದಾರೆ.👇
//ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿ ಗೌಪ್ಯತೆ//
ವಾಟ್ಸಾಪ್ ತೊರೆದು ಸಿಗ್ನಲ್ ಮತ್ತು ಟೆಲಿಗ್ರಾಂ ಮೆಸೆಂಜರ್ ಸೇವೆಗಳತ್ತ ಹೆಚ್ಚು ಜನ ಒಲವು ತೋರುತ್ತಿರುವುದು ಸಾಮಾಜಿಕ ಮಾಧ್ಯಮ ಕ್ಷೇತ್ರದ ಇತ್ತೀಚಿನ ಬೆಳವಣಿಗೆಯಾಗಿದೆ. ಹೀಗೆ ಬದಲಾಗುತ್ತಿರುವವರು ಕೊಡುವ ಪ್ರಮುಖ ಕಾರಣ, ವಾಟ್ಸಾಪ್ ಮೆಸೆಂಜರ್ ಸರ್ವಿಸ್ ನಲ್ಲಿ ಖಾಸಗಿತನದ ಗೌಪ್ಯತೆಯನ್ನು ಕದಿಯಲಾಗುತ್ತಿದೆ. ಟೆಲಿಗ್ರಾಂ ಮತ್ತು ಸಿಗ್ನಲ್ ಮೆಸೆಂಜರ್ ಸರ್ವಿಸ್ ನಲ್ಲಿ ಈ ರೀತಿಯಲ್ಲಿ ಗೌಪ್ಯತೆಯನ್ನು ಕದಿಯುವುದಿಲ್ಲ ಎನ್ನುವುದು. ಹೌದು ನಾವೆಲ್ಲರೂ ನಮ್ಮ ಸ್ಟೇಟಸ್ ಹಾಕುವ ರೀತಿಯಲ್ಲೆ ಈ ವಲಸೆಯ ನಂತರ ವಾಟ್ಸಾಪ್ ಕೂಡ ತನ್ನದೇ ಆದ ಒಂದು ಸ್ಟೆಟಸ್ ನ್ನು ಇದೇ ಮೊದಲ ಬಾರಿಗೆ ನಮ್ಮ ಸ್ವಂತ ವಾಟ್ಸಾಪ್ ದೂರವಾಣಿ ಸಂಖ್ಯೆಗೆ ಕಳುಹಿಸಿ “ನಾವು ಯಾವುದೇ ಖಾಸಗಿ ಗೌಪ್ಯತೆಯನ್ನು ಕದಿಯುವುದಿಲ್ಲ. ನಿಮ್ಮ ಗೌಪ್ಯತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ” ಎಂದು ಹೇಳಿಕೊಂಡಿದೆ. ಈಗ ವಾಟ್ಸಾಪ್ ಮೆಸೆಂಜರ್ ನ ಜಾಗತಿಕ ಬಳಕೆದಾರರ ಸಂಖ್ಯೆ ಎರಡು ಬಿಲಿಯನ್ ತಲುಪಿದೆ. ಆದರೀಗ ಜನರು ಸಿಗ್ನಲ್ ಮತ್ತು ಟೆಲಿಗ್ರಾಂನತ್ತ ಮುಖ ಮಾಡುತ್ತಿರುವುದು ವಾಟ್ಸಾಪ್ ಗೆ ತಲೆನೋವಾಗಿ ಪರಿಣಮಿಸಿದೆ.
ಗೂಗಲ್ ಸರ್ಚ್ ಇಂಜಿನ್ ನಲ್ಲಿ ಕೆಲವು ವಾಟ್ಸಾಪ್ ಗ್ರೂಪ್ ನ ವಿವರಗಳು ಬಹಿರಂಗವಾಗಿರುವುದೇ ಈ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ಅಂತರ್ ಜಾಲ ತಾಣಗಳಲ್ಲಿ ಖಾಸಗಿ ಗೌಪ್ಯತೆಗಳನ್ನು ಕದಿಯುವುದು ಇದು ಮೊದಲೇನು ಅಲ್ಲ. ಈ ರೀತಿಯ ಬೆಳವಣಿಗೆಗೆಳು ಹಿಂದಿನಿಂದಲೂ ಬಂದಿವೆ. ಮಾರ್ಕ ಜುಗರ್ ಬರ್ಗ್ ಫೇಸ್ ಬುಕ್ ಸ್ಥಾಪಿಸುವ ಮೂಲಕ ಎಂದೋ ನಮ್ಮ ನಿಮ್ಮ ಖಾಸಗಿಕೋಣೆಯವರೆಗೂ ಬಂದು ಕೂತಿದ್ದಾಗಿದೆ. ಈಗ ಅವರ ಸಮೂಹಕ್ಕೆ ಸೇರಿದ ವಾಟ್ಸಾಪ್ ಸರದಿ. ನಮ್ಮ ಖಾಸಗಿತನದ ಗೌಪ್ಯತೆಯನ್ನು ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿರುವವರನ್ನು ಏನೆಂದು ಕರೆಯಬೇಕು?
ಅದು ಸರಿ ನಮ್ಮ ಖಾಸಗಿತನವನ್ನು ಕದ್ದು ಅವರೇನೂ ಮಾಡುತ್ತಾರೆ? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಉಂಟಾಗುವುದು ಸಹಜ. ನಮ್ಮ ಖಾಸಗಿ ವಿವರಗಳನ್ನು ದೂರವಾಣಿ ಸಂಖ್ಯೆ, ಜನ್ಮ ದಿನಾಂಕ, ಇ-ಮೇಲ್ ವಿಳಾಸ, ಅಂಚೆ ವಿಳಾಸ, ಐಪಿ ವಿಳಾಸ, ಸರ್ಚ್ ಇಂಜೆನ್ ಹುಡುಕಾಟಗಳಲ್ಲಿ ಬಳಸಲಾದ ಪ್ರಮುಖ ಪದಗಳು, ನಾವು ಭೇಟಿ ನೀಡಿದ ಅಂತರ್ಜಾಲ ತಾಣಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮಾಹಿತಿಗಳು, ಆನ್ ಲೈನ್ ವಹಿವಾಟುಗಳು (ಕೆಲವನ್ನು ಮಾತ್ರ ಇಲ್ಲಿ ನೀಡಿದ್ದೇನೆ) ಇವುಗಳೆಲ್ಲವನ್ನು ಅಗತ್ಯ ಇರುವ ಮೂರನೇ ವ್ಯಕ್ತಿ ಅಥವಾ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ಹಣ ಮಾಡಿಕೊಳ್ಳುವ ಮೂಲಕ ನಮ್ಮ ವ್ಯಯಕ್ತಿಕ ವಿಷಯಗಳನ್ನು ಆಧಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ, ಈ ಕಿಲಾಡಿಗಳು. ನಿಮ್ಮ ದೂರವಾಣಿಗೆ ಅಥವಾ ನಿಮ್ಮ ಇ-ಮೇಲ್ ಗೆ ನೀವು ನಿಮ್ಮ ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು ಕೊಡದೇ ಇದ್ದರೂ ನಿಮ್ಮ ಇನ್ ಬಾಕ್ಸ್ ಗೆ ಸಂದೇಶಗಳು, ವಿವಿದ ಕಂಪನಿಗಳ ಜಾಹೀರಾತುಗಳು ಬಂದು ಬೀಳುತ್ತಿರುವುದನ್ನು ನೀವೆಲ್ಲರೂ ಗಮನಿಸಿರುತ್ತೀರಿ, ಅದೇ ರೀತಿ ನಿಮ್ಮ ಮೊಬೈಲ್ ಪೋನ್ ಗೆ ಮೇಸೇಜ್ ಗಳು ಬಂದು ಬೀಳುತ್ತಿರುತ್ತವೆ. ಇವರಿಗೆಲ್ಲಾ ನಿಮ್ಮ ಇ-ಮೇಲ್ ವಿಳಾಸ ಮತ್ತು ದೂರವಾಣಿ ಸಂಖ್ಯೆ ಹೇಗೆ ತಿಳಿಯಿತು? ಎಂಬುದರ ಕುರಿತು ಎಂದಾದರೂ ಯೋಚಿಸಿದ್ದೀರಾ? ಇದೆಲ್ಲಾ ನಿಮ್ಮ ಖಾಸಗಿ ವಿವರಗಳನ್ನು ನಿಮಗೆ ಗೊತ್ತಿಲ್ಲದಂತೆ ಕದ್ದು ಬೇರೆಯವರಿಗೆ ಮಾರಿಕೊಂಡಿದ್ದರ ಫಲ.
ಡೇಟಾದ ಗೌಪ್ಯತೆಯನ್ನು ಡೇಟಾದ ಸೂಕ್ತ ಬಳಕೆ ಎಂದು ಸುಲಭವಾಗಿ ಹೇಳಬಹುದು. ಕಂಪನಿಗಳು, ವ್ಯಾಪಾರಿಗಳು, ಸಾಮಾಜಿಕ ಮಾಧ್ಯಮಗಳು ನಾವು ಒದಗಿಸಿದ ಅಥವಾ ಅವರಿಗೆ ಒಪ್ಪಿಸಿದ ಡೇಟಾ ಅಥವಾ ಮಾಹಿತಿಯನ್ನು ಬಳಸುವಾಗ ಡೇಟಾವನ್ನು ಒಪ್ಪಿದ ಉದ್ದೇಶಗಳಿಗೆ ಅನುಗುಣವಾಗಿ ಬಳಸಬೇಕು. ಇದಕ್ಕೆ ಬದಲಾಗಿ ಒಬ್ಬರ ಖಾಸಗಿ ವಿಷಯಗಳು, ಕಾರ್ಯಗಳು, ಅಥವಾ ನಿರ್ಧಾರಗಳಲ್ಲಿ ಅವರಿಗೆ ಅರಿವಿಲ್ಲದಂತೆ ಒಳನುಸುಳುವುದನ್ನು ಗೌಪ್ಯತೆಯ ಕಳ್ಳತನ ಎನ್ನಬಹುದು. ಗೌಪ್ಯತೆಯು ಸಂವಿಧಾನದ ಪ್ರಕಾರ ಮೂಲಭೂತ ಹಕ್ಕು ಅಲ್ಲದಿದ್ದರೂ ಆರ್ಟಿಕಲ್ 21(ಜೀವಿಸುವ ಹಕ್ಕು) ಅನ್ವಯ ಅದು ವ್ಯಯಕ್ತಿಕ ಹಾಗೂ ಸಾಮಾನ್ಯ ಕಾನೂನಿ ಹಕ್ಕು ಎಂದು ಗುರುತಿಸಲ್ಪಟ್ಟಿದೆ. ಮೆನಕಾ ಗಾಂಧಿ ಮತ್ತು ಆರ್ಸಿ ಕೂಪರ್ ಪ್ರಕರಣದಲ್ಲಿ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಗೌಪ್ಯತೆಯ ಹಕ್ಕು ಇಲ್ಲದಿದ್ದರೆ ಅದು ಅನೂರ್ಜಿತವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಜೀವನದ ಹಕ್ಕು ಮತ್ತು ವ್ಯಯಕ್ತಿಕ ಸ್ವಾತಂತ್ರ್ಯ ಇವುಗಳು ಅತ್ಯಂತ ಮುಖ್ಯವಾಗಿರುತ್ತವೆ. ‘ಮಾಹಿತಿ ತಂತ್ರಜ್ಞಾನ ಕಾಯಿದೆ 2000’ವು ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುತ್ತದೆ. ಈ ಕಾಯಿದೆ ಗೌಪ್ಯತೆಯನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗದಿದ್ದರೂ ಅದನ್ನು ದುರ್ಭಲಗೊಳಿಸಲು ಶಕ್ತವಾಗಿದೆ. ಈ ಕಾಯಿದೆಯ ಸೆಕ್ಷನ್ 43, 66, 66ಎಫ್ ಮತ್ತು 67 ಬಳಕೆದಾರರ ಗೌಪ್ಯತೆಯನ್ನು ಸ್ಪಷ್ಟವಾಗಿ ರಕ್ಷಿಸುವಲ್ಲಿ ಸಹಾಯಕವಾಗಿವೆ. ಇತ್ತಿಚೆಗೆ ಸುಪ್ರಿಂಕೋರ್ಟ್ ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ ಸೆಕ್ಷನ್ 66ಎ ಅನ್ನು ತಡೆಹಿಡಿದಿದೆ. ಇದು ಅಂತರ್ಜಾಲದಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡಿದ ಅನೇಕರನ್ನು ಬಂಧಿಸಲು ಕಾರಣವಾಗಿತ್ತು. ಆದರೂ ಭಾರತದಲ್ಲಿ ಗೌಪ್ಯತೆಯ ಉಲ್ಲಂಘನೆಯ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಸಂವಿಧಾನದ ಆರ್ಟಿಕಲ್ 19(1)(ಎ) ಪ್ರಕಾರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕೊಡಲಾಗಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವು ಯಾರಿಗೂ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದಿಲ್ಲ ಬಯಸಿದ ಯಾವುದನ್ನಾದರೂ ಬರೆಯಬಹುದು ಅಥವಾ ಹೇಳಬಹುದು ಎಂದು ಖಚಿತ ಪಡಿಸುವುದಿಲ್ಲ. ಭಾರತದ ಸಾರ್ವಬೌಮತ್ವ ಮತ್ತು ಸಮಗ್ರತೆ, ಸುರಕ್ಷತೆ, ವಿದೇಶಗಳೊಂದಿಗೆ ಸ್ನೇಹ ಸಂಬಂಧಗಳು, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆ ಇಂತಹ ವಿಷಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಂಜಸವಾದ ನಿರ್ಭಂದಗಳಿಗೆ ಒಳಪಟ್ಟಿರುತ್ತದೆ. ಯಾವ ಮಾಧ್ಯಮವೂ ಇದರಿಂದ ಹೊರತಾಗಿಲ್ಲ, ಎಂಬುದನ್ನು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಎಲ್ಲಾ ಮಾಧ್ಯಮಗಳು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಅನೇಕ ಪ್ರಕರಣಗಳಲ್ಲಿ ಭಾರತದ ಸುಪ್ರಿಂಕೋರ್ಟ್ ವಾಕ್ಚಾತುರ್ಯತೆಯ ಮೇಲಿನ ನಿರ್ಬಂಧಗಳನ್ನು ಎತ್ತಿ ಹಿಡಿಯುವ ಮೂಲಕ ಭಾರತೀಯ ದಂಡ ಸಂಹಿತೆಯ ಅಪರಾಧ, ಮಾನಹಾನಿ ವಿಭಾಗಗಳ ಸಾಂವಿಧಾನಿಕತೆಯನ್ನು ಎತ್ತಿ ಹಿಡಿದಿದೆ. ಇಂಡಿಯನ್ ಟೆಲಿಗ್ರಾಫ್ ಆಕ್ಟ್ 1885ರ ಸೆಕ್ಷನ್ 5ರ ಪ್ರಕಾರ ಪರವಾನಿಗಿ ಪಡೆದ ಸಂಸ್ಥೆಗಳನ್ನೂ ಸ್ವಾಧೀನಪಡಿಸಿಕೊಳ್ಳಲು ಮತ್ತು ಸಂದೇಶಗಳನ್ನು ಪ್ರತಿಬಂಧಿಸಲು ಆದೇಶಿಸುವ ಅಧಿಕಾರ ಇದೆ. ಭಾರತದ ಚುನಾವಣಾ ಆಯೋಗವು ತನ್ನ 2013ರ ಸೂಚನೆಗಳಲ್ಲಿ ಸಾಮಾಜಿಕ ಮಾಧ್ಯಮಗಳು, ಅಂತರ್ ಜಾಲ ತಾಣಗಳು ಕೂಡ ವ್ಯಾಖ್ಯಾನದಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳಾಗಿವೆ ಎಂದು ಹೇಳಿದೆ. ಅದೇ ರೀತಿ 2004ರ ಆದೇಶದಲ್ಲಿ ಒಳಗೊಂಡಿರುವ ಸೂಚನೆಗಳ ಅನುಸಾರ ಸಾಮಾಜಿಕ ಮಾಧ್ಯಮ ಅಂತರ್ಜಾಲ ತಾಣಗಳು ಸೇರಿದಂತೆ ಎಲ್ಲಾ ಅಂತರ್ಜಾಲ ತಾಣಗಳಿಗೆ ಮ್ಯುಟಾಟಿಸ್ ಮತ್ತು ಮ್ಯುಟಾಂಡಿಸ್ ಸಹ ಅನ್ವಯಿಸುತ್ತದೆ.
ಇತ್ತೀಚೆಗೆ ಟ್ರೋಲಿಂಗ್ ಸಾಮಾಜಿಕ ಮಾಧ್ಯಮಗಳ ಒಂದು ಭಾಗವಾಗಿ ಪರಿಣಮಿಸಿದೆ. ಟ್ರೋಲಿಂಗ್ ವಿಡಿಯೋಗಳು ವೀಕ್ಷಕರಿಗೆ ಮಜಾ ಕೊಡಬಹುದು. ಇದು ಅನೇಕ ಜನರ ವ್ಯಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಮರೆಯಬಾರದು. ಟ್ರೋಲಿಂಗ್ ಗೆ ಒಳಗಾದ ವ್ಯಕ್ತಿಯ ಮಾನಸಿಕ ತುಮಲಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ಸಾಮಾಜಿಕ ಮಾಧ್ಯಮಗಳು ಉಂಟು ಮಾಡಿರುವ ಇಂತಹ ಪರಿಸ್ಥಿತಿಯನ್ನು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಎಂದು ಕೆಲವು ಸಂವಹನ ತಜ್ಞರು ಕರೆದಿದ್ದಾರೆ.
ಕಳೆದ ಎರಡು ದಶಕಗಳಿಂದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ರಾಂತಿಕಾರಕವಾಗಿ ಬೆಳೆದಿದದೆ. ಜಗತ್ತಿನ ಜನಸಂಖ್ಯೆಯ ಶೇ.45ರಷ್ಟು ಜನರ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದು ವಿಶ್ವವು ನಂಬಲಾಗದಷ್ಟು ವೇಗದಲ್ಲಿ ಬದಲಾಗುತ್ತಿದೆ. 1.3 ಬಿಲಿಯನ್ ಜನರಿರುವ ಭಾರತದಲ್ಲಿ ಸುಮಾರು 500ಮಿಲಿಯನ್ ಅಂತರ್ಜಾಲ ಬಳಕೆದಾರರಿದ್ದಾರೆ. ಸಾಮಾಜಿಕ ಮಾಧ್ಯಮಗಳು ಅಂತರ್ಜಾಲ ಆಧಾರಿತ ಸಂವಹನದ ರೂಪವಾಗಿವೆ. ಇದೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ಜನಪ್ರೀಯತೆಯೊಂದಿಗೆ ಸೈಬರ್ ಅಪರಾಧಗಳೂ ಹೆಚ್ಚಾಗಿವೆ. ಇದರ ಫಲವಾಗಿ ಪೊಲೀಸ್ ಹಾಗು ರಕ್ಷಣಾ ಇಲಾಖೆಗಳಲ್ಲಿ ಸೈಬರ್ ಅಪರಾಧ ಘಟಕಗಳು ಎಂಬ ಪ್ರತ್ಯೇಕ ಘಟಕಗಳು ಆರಂಭವಾಗಿವೆ. ಅಂತರ್ ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ವ್ಯವಸ್ಥೆಯಲ್ಲಿನ ಅಡೆತಡೆಗಳು ಮತ್ತು ದೋಷಗಳು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತವೆ.
ನೀವು ಫೇಸ್ ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದಾಗ ನಿಮಗೆ ಸಂತೋಷವಾಗಬಹುದು. ಮತ್ತು ಇಂತಹ ಪ್ರತಿಕ್ರಿಯೆಗಳಿಗೆ ನೀವೂ ಕೂಡ ಪ್ರತಿಕ್ರಿಯೆ ನೀಡುವುದು ಸಾಮಾನ್ಯ ವಿಷಯವಾಗಿದೆ. ತಿಳಿದುಕೊಳ್ಳಿ ಈ ಹಂತದಂದಲೇ ನಿಮ್ಮ ಖಾಸಗಿ ಮಾಹಿತಿಗಳನ್ನು ಕದಿಯುವ ಕೆಲಸ ಶುರುವಾಗುತ್ತದೆ. ಫೇಸ್ ಬುಕ್ ಖಾಸಗಿ ಮಾಹಿತಿಯನ್ನು ಕದಿಯುತ್ತದೆ ಎಂಬುದು ಇಂದು ನಿನ್ನೆಯ ವಿಷಯವೇನೂ ಅಲ್ಲ. 2016ರಲ್ಲಿ ಅಮೇರಿಕದ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರಲು ಫೇಸ್ ಬುಕ್ ಸುಮಾರು 50 ದಶಲಕ್ಷಕ್ಕೂ ಹೆಚ್ಚು ಫೇಸ್ ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಬಳಸಿಕೊಂಡಿತ್ತು ಎಂಬ ಅಪವಾದ ಫೇಸ್ ಬುಕ್ ಮೇಲಿದೆ. ಹಾಗೂ ಇದಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ವಿಶ್ವದಾದ್ಯಂತ ವಿವಿದ ದೇಶಗಳಲ್ಲಿ ನ್ಯಾಯಾಲಯಗಳ ಕಟಕಟೆಯಲ್ಲಿ ಇವೆ. ಹಾಗೆ ನೋಡಿದರೆ 1990ರ ದಶಕದಲ್ಲೆ ಸೈಬರ್ ಅಪರಾಧದ ಪರಿಕಲ್ಪನೆಯು ಹೊರಹೊಮ್ಮಿತು. ಚೀನಾ ಮಾತ್ರ ಫೇಸ್ ಬುಕ್ ಮತ್ತು ವಾಟ್ಸಾಪ್ ಗೆ ಆರಂಭದಿಂದಲೂ ನಿಷೇಧ ಏರಿದ್ದು ತನ್ನ ದೇಶದಲ್ಲಿ ಅವುಗಳಿಗೆ ಜಾಗ ನೀಡಿಲ್ಲ.
ಹಾಗಾದರೆ ನಮ್ಮ ಖಾಸಗಿ ಗೌಪ್ಯತೆಗಳನ್ನು ಕದಿಯುವುದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಬಂದಿರಬಹದು. ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಇದರಿಂದ ಸ್ವಲ್ಪ ರಕ್ಷಣೆ ಪಡೆಯಬಹುದು. ಅವುಗಳೆಂದರೆ, ಸೋಷಿಯಲ್ ಮೀಡಿಯಾ ಬಳಸುವವರು ತಮ್ಮ ಪ್ರೊಫೈಲ್ ಗಳನ್ನು ರಚಿಸುವಾಗ ಖಾಸಗಿ ವಿಷಯಗಳನ್ನು ಸ್ವಲ್ಪ ಕಡಿಮೆ ನೀಡುವುದು ಒಳ್ಳೆಯದು. ತೀರಾ ಖಾಸಗಿ ಎನಿಸುವ ಕೌಟಂಬಿಕ ವಿಷಯಗಳು, ಬೇರೆಯವರಿಂದ ಮೋಸ ಹೋದ ವಿಷಯಗಳು, ವಿಳಾಸ, ದೂರವಾಣಿ ಸಂಖ್ಯೆ, ಹುಟ್ಟಿದ ದಿನಾಂಕ ಮುಂತಾದ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳು ಹಾಗೂ ಜಾಹೀರಾತು ನೀಡುವ ಅಂತರ್ ಜಾಲ ತಾಣಗಳಲ್ಲಿ ಹಂಚಿಕೊಳ್ಳದಿರುವುದು ಒಳ್ಳೆಯದು. ಕೆಲವರು ಫೇಸ್ ಬುಕ್ ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ನಾನೀಗ ದೆಹಲಿಯಲ್ಲಿದ್ದೇನೆ..ಕುಟುಂಬದವರೆಲ್ಲಾ ಪ್ರವಾಸದಲ್ಲಿದ್ದೇವೆ ಎಂದು ಪೋಟೋ ಸಮೇತ ಶೇರ್ ಮಾಡಿ ಹಂಚಿಕೊಳ್ಳುತ್ತಾರೆ. ಇಂತಹ ವಿಷಯಗಳು ತುಂಬಾ ಸೂಕ್ಷ್ಮತೆಯಿಂದ ಕೂಡಿರುತ್ತವೆ. ನೀವು ಯಾರೊಂದಿಗಿದ್ದೀರಿ? ಎಲ್ಲಿದ್ದೀರಿ? ಎಷ್ಟು ದಿನ ಅಲ್ಲೇ ಇರುತ್ತೀರಿ? ಮುಂತಾದ ನೈಜ ಸಮಯ ಮತ್ತು ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ಎಲ್ಲಕ್ಕಿಂತ ಮುಖ್ಯವಾಗಿ ಫ್ರೆಂಡ್ ರಿಕ್ವೆಸ್ಟ್ ಗಳನ್ನು ಕಳುಹಿಸುವಾಗ ಮತ್ತು ಸ್ವೀಕರಿಸುವಾಗ ಹಾಗೂ ಸಂದೇಶಗಳನ್ನು ಸ್ವೀಕರಿಸುವಾಗ, ಅವುಗಳು ಯಾರಿಂದ ಬಂದಿವೆ? ಎಂಬುದರ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ.
ನಿಮ್ಮ ಮೊಬೈಲ್ ಅಪ್ಲಿಕೇಷನ್ಸ್ ಮತ್ತು ಸಾಫ್ಟ್ ವೇರ್ ಹಾಗೂ ಆಂಟಿವೈರಸ್ ಗಳನ್ನು ಆಗಾಗ ಅಪ್ ಡೇಟ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಮಾಹಿತಿ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಇಂತಹ ಅಪ್ಡೇಟ್ ಗಳು ತುಂಬಾ ಅವಶ್ಯಕ. ಪ್ರೈವೆಸಿ ಸೆಟಿಂಗ್ಸ್ ನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅನಗತ್ಯ ಎನಿಸಿದ ವ್ಯಕ್ತಿಗಳನ್ನು ಬ್ಲಾಕ್ ಮಾಡುವುದು, ಅಂತಹವರ ಫ್ರೆಂಡ್ ಷಿಪ್ ನಿಂದ ಹೊರಬರುವುದು ಸೂಕ್ತ. ಅಗತ್ಯವಿಲ್ಲದ ಪುಟಗಳನ್ನು ಫಾಲೋ ಮಾಡಬಾರದು ಅದೇ ರೀತಿ ಅನಗತ್ಯ ಗ್ರೂಪ್ ಗಳಿಂದ ಹೊರಬರುವುದು ಒಳಿತು. ಟೈಮ್ ಲೈನ್, ಕಾಮೆಂಟ್, ಹಾಗೂ ಇನ್ ಬಾಕ್ಸ್ ಗಳನ್ನು ನೆಗೆಟಿವ್ ವಿಷಯಗಳಿಂದ ಮುಕ್ತವಾಗಿರಿಸಿ. ಅನಗತ್ಯವೆನಿಸುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಲು ಹೋಗಬೇಡಿ.
ಸಾಮಾಜಿಕ ಮಾಧ್ಯಮಗಳಾದ ಪೇಸ್ ಬುಕ್, ವಾಟ್ಸಾಪ್, ಟ್ವಿಟರ್, ಗೂಗಲ್, ಶೇರ್ ಚಾಟ್, ಇತ್ಯಾದಿ ಸಂಸ್ಥೆಗಳು ಹಾಗೂ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ 2019ರಲ್ಲಿ ಸ್ವಯಂ ಪ್ರೇರಿತ ನೀತಿ ಸಂಹಿತೆಯನ್ನು ಅಳವಡಿಸಿಕೊಳ್ಳುವುದಾಗಿ ಒಪ್ಪಿಕೊಂಡಿದ್ದವು. ಆದರೆ ನಂತರದ ದಿನಗಳಲ್ಲಿ ನೀತಿ ಸಂಹಿತೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿವೆ.
ದೇಶದ ಸಮಸ್ಯೆಗಳಿಗೆ ಆಧ್ಯತೆ ನೀಡುವುದು ಮತ್ತು ಅಭಿವೃದ್ದಿಶೀಲ ತಂತ್ರಜ್ಞಾನಗಳೊಂದಿಗೆ ಕಟ್ಟುನಿಟ್ಟಿನ ಕಾನೂನುಗಳನ್ನುರೂಪಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೇ ರೀತಿ ಖಾಸಗಿ ಹಾಗೂ ಗೌಪ್ಯ ಸಂಗತಿಗಳನ್ನು ಬಳಕೆದಾರರಿಗೆ ಅರಿವಿಲ್ಲದಂತೆ ಕದಿಯುವವರ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯವೇ ಸರಿ. ಆದ್ದರಿಂದ ಗೌಪ್ಯತೆಗೆ ಆಧ್ಯತೆ ನೀಡಬೇಕು ಮತ್ತು ಗೌಪ್ಯತೆಯನ್ನು ಮೂಲಭೂತ ಹಕ್ಕು ಎಂದು ಗುರುತಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಜೊತೆಗೆ ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಕುರಿತು ಜನರಿಗೆ ಶಿಕ್ಷಣ ನೀಡುವ ಕಾರ್ಯಕ್ರಮಗಳು ಜಾರಿಗೆ ಬರಬೇಕಾಗಿದೆ.
###
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು-ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346