ಅನುದಿನ ಕವನ-೩೫ (ಕವಿ: ಕೆ.ಬಿ.ವೀರಲಿಂಗನಗೌಡ್ರು, )

ಕವಿ ಕೆ.ಬಿ.ವೀರಲಿಂಗನಗೌಡ್ರು:
ನೇರ, ನಿಷ್ಠುರ, ಸರಳ ವ್ಯಕ್ತಿತ್ವದ ಕೆ.ಬಿ.ವೀರಲಿಂಗನಗೌಡ್ರ ಚಿತ್ರಕಲಾ ಶಿಕ್ಷಕರು. ಬಾದಾಮಿ ಜನ್ಮಭೂಮಿ..ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಕರ್ಮಭೂಮಿ. ಘಟಸರ್ಪ(ನಾಟಕ)ಅರಿವಿನ ಹರಿಗೋಲು(ಕವನ ಸಂಕಲನ)ಅವಳು ಮಳೆಯಾಗಲಿ(ಕಥಾ ಸಂಕಲನ)ಪ್ರಕಟಿಸಿರುವ ಗೌಡ್ರ ಈಚಿನ ಕೃತಿ ನಿರುತ್ತರ(ಕವಿತೆಗಳು)
ಆತ್ಮಸಂಗಾತಕ್ಕೆ ಕವಿತೆ ಬರೆಯುವ ಗೌಡ್ರ ನಿರುತ್ತರದಲ್ಲಿ ಸಾಕಿಯ ಮುಖೇನ ತಮ್ಮ ಸಂವೇದನೆಗಳನ್ನು ಚಂದಗೆ ಅಭಿವ್ಯಕ್ತಿಸಿದ್ದಾರೆ. ಕಾಗದ ಸಾಂಗತ್ಯ ಪ್ರಕಾಶನದ ಈ ಕೃತಿಯಲ್ಲಿ ಕವಿತೆಗಳಷ್ಟೇ ಮಾತನಾಡುವ ಚಿತ್ರಗಳಿವೆ.
ಕೆ.ಬಿ.ವೀ ಯವರ ಎರಡು ಕವಿತೆಗಳು ಇಂದಿನ “ಅನುದಿನ ಕವನ”ದಲ್ಲಿ…
-ರಂಹೊ
*****

ನಿರುತ್ತರ

ಸಾಕಿ..
ಮಾತು ಕಥೆಯಾಗಿ
ಕವಿತೆ ಮೌನವಾಗಿದ್ದಕ್ಕೆ

ಸಾಕಿ..
ಕುಡಿಯುತ್ತಿದ್ದೇನೆ
ಕಥೆ ಮಾತೆಯಾಗಿ
ಸಂಗಾತಿ ಕವಿತೆಯಾಗಿದ್ದಕ್ಕೆ

ಸಾಕಿ..
ಕುಡಿಯುತ್ತಿದ್ದೇನೆ
ಮಾತೆ ಬೇರಾಗಿ
ಚಿಗುರು ಸಂಗಾತಿಯಾಗಿದ್ದಕ್ಕೆ

ಸಾಕಿ..
ಕುಡಿಯುತ್ತಿದ್ದೇನೆ
ಬೇರು ಚಿಗುರು
ಮುಖಾಮುಖಿಯಾಗದ್ದಕ್ಕೆ

ಸಾಕಿ..
ಕುಡಿಯುತ್ತಿದ್ದೇನೆ
ನಿರುತ್ತರದಲ್ಲಿ ಕುಳಿತು
ಅಮೂರ್ಥ ಅರ್ಥವಾಗದ್ದಕ್ಕೆ.
*********************
#ತಕ್ಕಡಿ

ಸಾಕಿ..
ಸಮುದ್ರ
ಕ್ಷಮೆ ಕೇಳದ್ದೇ ತಪ್ಪಾಗಿದೆ
ಬಾವಿಕಪ್ಪೆಗಳ ದಬ್ಬಾಳಿಕೆಯಲಿ!

ಸಾಕಿ..
ಗುಳ್ಳೆನರಿಯ
ಕುತಂತ್ರದ ಮುಂದೆ
ತಂತ್ರಜ್ಞಾನವೇ ಶರಣಾಗಿದೆ!

ಸಾಕಿ..
ಚಾಡಿ
ಸಾಕ್ಷಿಕರಿಸಿದಾಗಲೇ
ಸತ್ಯ ಲೋಕವಿರೋಧಿಯಾಗಿದೆ!

ಸಾಕಿ..
ಲಂಬರೇಖೆ
ವಕ್ರವಾಗದ್ದೇ ತಪ್ಪಾಗಿದೆ
ಊಸರವಳ್ಳಿಗಳ ಲೆಕ್ಕಾಚಾರದಲಿ!

ಸಾಕಿ..
ಬಯಲಲಿ
ತೂಗುವ ತಕ್ಕಡಿಯೊಂದಿದೆ
ಅಲ್ಲಿ ಒಲವಿಗಷ್ಟೇ ಗೆಲುವು ಸಿಗಲಿದೆ!

~ಕೆ.ಬಿ.ವೀರಲಿಂಗನಗೌಡ್ರ

One thought on “ಅನುದಿನ ಕವನ-೩೫ (ಕವಿ: ಕೆ.ಬಿ.ವೀರಲಿಂಗನಗೌಡ್ರು, )

Comments are closed.