ಖಾಲಿ ಬಿಂದಿಗೆ ಸದ್ದು ಮಾಡುವಷ್ಟು, ತುಂಬಿದ ಕೊಡ ಸದ್ದು ಮಾಡುವುದಿಲ್ಲ. ಅದೆಷ್ಟೇ ಸದ್ದು ಮಾಡಿದರೂ ತುಂಬಿದ ಬಿಂದಿಗೆಗಿರುವ ಬೆಲೆ ಖಾಲಿ ಕೊಡಕ್ಕಿಲ್ಲ. ಅದೆಷ್ಟೇ ಹೊಳೆದರೂ ಕಾಗೆ ಬಂಗಾರ ನಿಜ ಚಿನ್ನವಾಗುವುದಿಲ್ಲ. ಕ್ಷಣಕಾಲ ಮಿಂಚಿ ನಾಶವಾಗುವ ಉಲ್ಕೆ, ನಿಜ ತಾರೆಯಂತೆ ಬಾನಂಗಳದಿ ಹೊಳೆಯಲು ಸಾಧ್ಯವಿಲ್ಲ.
ಈ ಸತ್ಯಗಳನ್ನು ನಮಗೂ ಅನ್ವಯಿಸಿಕೊಂಡರೆ, ವ್ಯಕ್ತಿತ್ವಕ್ಕೊಂದು ಘನತೆ, ಬದುಕಿಗೊಂದು ಮಾನ್ಯತೆ. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಕಾಗೆಬಂಗಾರ.!
ಮೂರ್ಖನಂತಾಡು
ಎಂದು ಮೂರ್ಖನಾಗಬೇಡ.!
ಬುದ್ದಿವಂತನಂತಾಡಬೇಡ
ಸದಾ ಬುದ್ದಿವಂತನಾಗು..!
ಕತ್ತಲಲ್ಲಿದ್ದಂತಾಡು
ಎಂದು ಕತ್ತಲಲ್ಲಿರಬೇಡ.!
ಬೆಳಕಿನಲ್ಲಿದ್ದಂತಾಡಬೇಡ
ನಿತ್ಯ ಬೆಳಕಿನಲ್ಲಿರು.!
ಅವಿವೇಕಿಗಳ ಕೂಡ
ಸಹಿಸಬಲ್ಲುದು ಜಗತ್ತು.!
ಅಧಿಕಪ್ರಸಂಗಿಗಳನೆಂದು
ಒಪ್ಪಿಕೊಳ್ಳದೂ ಕಿಂಚಿತ್ತು.!
ಇದ್ದು ಇಲ್ಲದಂತಿರುವರ
ಅಪ್ಪಿಕೊಂಡಿದೆ ಲೋಕ
ಏನಿಲ್ಲದೆ ಬಡಬಡಿಸುವರ
ಆದರಿಸಿಲ್ಲ ಈತನಕ.!
ಆತ್ಮವಿಶ್ವಾಸಿಗಳಿಗಿಹುದು
ಇಲ್ಲಿದೆ ಪುರಸ್ಕಾರ.!
ಅಹಮಿಕೆ ಅಂಧವಿಶ್ವಾಸಕೆ
ಬರಿದೆ ತಿರಸ್ಕಾರ.!
ಡಾಂಭಿಕತೆ ಕೃತ್ರಿಮತೆ
ಜನಕ್ಕೆಂದು ಪ್ರಿಯವಲ್ಲ
ಜಗವನ್ನೂ ಗೆದ್ದಿಲ್ಲ..
ಮಿಂಚಿದೆಯಷ್ಟೆ ಕ್ಷಣಕಾಲ.!
ನೈಜತೆಗಷ್ಟೇ ಇಲ್ಲಿದೆ
ಸದಾಕಾಲಕ್ಕೂ ನೆಲೆ
ಸತ್ಯ ಸತ್ವಸಾರಗಳಿಗಿದೆ
ಅನುಗಾಲವೂ ಬೆಲೆ.!
ಎ.ಎನ್.ರಮೇಶ್. ಗುಬ್ಬಿ.
*****