ಬಳ್ಳಾರಿ ಜಿಲ್ಲೆಯ ಮಂಡಕ್ಕಿ ಮಿರ್ಚಿ ಎಂಬ ಜೋಡಿ ಗೆಳೆಯರು -ಸಿದ್ಧರಾಮ ಕೂಡ್ಲಿಗಿ

ವಿಶೇಷ ಲೇಖನ)
ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಿಯೇ ಹೋದರೂ ಇಲ್ಲಿಯ ಟ್ರೇಡ್ ಮಾರ್ಕ್ ಎಂದರೆ ” ಮಂಡಕ್ಕಿ ಮಿರ್ಚಿ “.

ಅದೆಂಥ ಖುಷಿಯ ಪ್ರಸಂಗ ಇದ್ದರೂ ಈ ಜಿಲ್ಲೆಯ ಜನರಿಗೆ ದೊಡ್ಡ ಪಾರ್ಟಿ ಎಂದರೆ ಈ ಮಂಡಕ್ಕಿ ಮಿರ್ಚಿ. ಹಾಗೆ ನೋಡಿದರೆ ಈ ಸಣ್ಣ ತಿಂಡಿಯಿಂದಲೇ ತುಂಬಾ ಖುಷಿ ಇಲ್ಲಿಯ ಜನರಿಗೆ. ದೊಡ್ಡ ನಗರಗಳಲ್ಲಿ, ಪಟ್ಟಣಗಳಲ್ಲಿ ಅತ್ಯಂತ ದುಬಾರಿಯ ” ಪಾರ್ಟಿ ” ಇದ್ದರೆ, ಇಲ್ಲಿ ನೋಡಿ ಏನೇ ಒದ್ದಾಡಿದರೂ ಇಲ್ಲಿಯವರ ಖುಷಿಯೆಲ್ಲ ಕೆಲವೇ ರೂಪಾಯಿಗಳಲ್ಲಿ ಮುಗಿದುಹೋಗುತ್ತದೆ.

ಸಂಜೆಯಾದರೆ ಅದೆಂಥ ಖುಷಿ ಇಲ್ಲಿಯ ಜನರಿಗೆ ಅಂದರೆ, ಮಂಡಕ್ಕಿ ಮಿರ್ಚಿ ತಿನ್ನಲೆಂದೇ ನಾಲಗೆ ಹಾವಿನಂತೆ ಹೊರಳಾಡುತ್ತಿದ್ದರೆ, ಹೊಟ್ಟೆಯಲ್ಲಿ ಇಲಿಗಳು ಓಡಾಡಿದಂತೆನಿಸುತ್ತಿರುತ್ತದೆ.

ಸುಮಾರು 30 ವರ್ಷಗಳ ಹಿಂದೆ ಬಂದಾಗ ಇಲ್ಲಿಯ ” ಮಂಡಕ್ಕಿ-ಮಿರ್ಚಿ” ಯ ರುಚಿ ಗೊತ್ತಿರಲಿಲ್ಲ. ನಿಧಾನವಾಗಿ ಗೊತ್ತಾಯಿತು. ಅದೇನು ಮೋಡಿಯೋ, ಮಾಯವೋ, ಮಂತ್ರವೋ ಗೊತ್ತಿಲ್ಲ ಇಲ್ಲಿಯ ಮಿರ್ಚಿಯ ರುಚಿಯೇ ಬೇರೆ.

ತಟ್ಟಿ ಹೋಟಲ್ ನಲ್ಲಿ ಧಗಧಗನೆ ಒಡಲ ಉರಿಯಂತೆ ಧಗಿಸುವ ಒಲೆಯ ಮೇಲೆ ದೊಡ್ಡದಾದ ಕಪ್ಪು ಕಡಾಯಿಯಲ್ಲಿ ಮುಳುಗಿ ಈಜುವಷ್ಟು ಎಣ್ಣೆಯಲ್ಲಿ, ಪಕ್ಕದಲ್ಲಿಯೇ ಕುಳಿತವನು ಅಲ್ಯುಮಿನಿಯಂ ಪುಟ್ಟಿಯಲ್ಲಿ ಹಳದಿ ಬಣ್ಣದ ಹಸಿಕಡಲೆ ಹಿಟ್ಟನ್ನು ಭರಭರನೆ ಕಲೆಸಿ ಅದನ್ನೊಂದು ಹದಕ್ಕೆ ತಂದು, ಹಸಿರು ಉಡುಗೆ ಉಟ್ಟಂತಿರುವ ದೊಡ್ಡ ಹಸಿಮೆಣಸಿನಕಾಯಿಗಳ ಹೊಟ್ಟೆಯನ್ನು (ಮಿರ್ಚಿ ಮಾಡಲೆಂದೇ ಇಲ್ಲಿ ವಿಶೇಷವಾಗಿ ಈ ಮೆಣಸಿನಕಾಯಿಗಳನ್ನು ಬೆಳೆಯುತ್ತಾರೆ) ಸೀಳಿ ಅದರಲ್ಲಿ ಜೀರಿಗೆ ಉಪ್ಪು ತುಂಬಿ, ಅವುಗಳ ತಲೆಯ ತೊಟ್ಟನ್ನು ಹಿಡಿದು ಹದವಾಗಿ ಕಲೆಸಿದ ಹಿಟ್ಟಿನಲ್ಲಿ ಚಾಕಚಕ್ಯತೆಯಿಂದ ಪಟ್ಟನೆ ಅದ್ದಿ ಕುದಿಯುವ ಎಣ್ಣೆಯಲ್ಲಿ ಅದನ್ನು ಬಿಟ್ಟಾಗ ನೋಡಬೇಕು………….. ಅಹಹಹಹಾ………. ಕಪ್ಪು ಕಡಾಯಿಯಲ್ಲಿ ಹಳದಿ ದೇಹ, ಹಸಿರು ಒಡಲನ್ನು ಹೊತ್ತ ಮಿರ್ಚಿಗಳು ಮೇಲೆ ಕೆಳಗೆ ಆಗುತ್ತ ಭರಭರನೆ ಉಬ್ಬಿ, ಬೇಯುತ್ತಿದ್ದರೆ ” ತಿನ್ನುವುದಿಲ್ಲ ” ಎಂಬ ಭೂಪನೂ ಬಾಯಲ್ಲಿ ನೀರೂರಿಸಿಕೊಂಡು ಬಿಸಿ ಮಿರ್ಚಿ ತಿನ್ನಲ್ಲು ಸನ್ನದ್ಧನಾಗಿಬಿಡುತ್ತಾನೆ. ಅಂಥ ಮೋಡಿ ಈ ಮಿರ್ಚಿಗಳದ್ದು.

ಹಾಗೆ ಮೇಲೆ ಕೆಳಗೆ ತೇಲಾಡಿ ನೋಡುಗರ ಕಣ್ಣಲ್ಲಿ ಮಿಂಚಿ, ಅಗಲವಾದ ಕಬ್ಬಿಣದ ಜರಡಿಯಲ್ಲಿ ತೇಲಿ ಕುಳಿತ ನಂತರ ಎಣ್ಣೆಯನ್ನೆಲ್ಲ ಬಸಿದುಕೊಂಡು ಅಗಲವಾದ ಮಿರ್ಚಿ ತಿನ್ನಲು ಸಿದ್ಧವಾಗುತ್ತವೆ. ಬರೀ ಮಿರ್ಚಿ ತಿನ್ನುವುದಾ ಛೇ ಛೇ……….. ಅದರ ಜೊತೆ ಬಿಳಿ ಮಂಡಕ್ಕಿ ಇದ್ದರೇ ಅದಕ್ಕೊಂದು ಲಕ್ಷಣ. ಬಿಳಿ ಮಂಡಕ್ಕಿ, ಅದರ ಮೇಲೆ ಸ್ವಲ್ಪ ಹಳದಿ ಕೆಂಪಿನ ತೆಳುವಾದ ತುಂಡರಿಸಿದ ತಂತಿಗಳಂತಹ ಕುರುಕುರು ಅನ್ನುವ ಖಾರಸೇವು, ಪಕ್ಕಕ್ಕೆ ಒಂದಿಷ್ಟು ಚಂದಗೆ ಹೆಚ್ಚಿದ ಈರುಳ್ಳಿ, ಹಳದಿ ಹೊದಿಕೆಯ, ಹಸಿರು ಒಡಲಿನ ಮಿರ್ಚಿ ಇನ್ನೇನು ಬೇಕು. ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆಯೇ.

ಗೆಳೆಯರೆಲ್ಲ ಸೇರಿ ಮಂಡಕ್ಕಿ ಮಿರ್ಚಿ ತಿನ್ನುವ ಸಮಾರಾಧನೆ ಆದರೇ ಆ ಸ್ನೇಹಕ್ಕೊಂದು ಬೆಲೆ ಎನ್ನುವಂತೆ ಈ ಭಾಗದಲ್ಲಿ ರೂಢಿಯಾಗಿದೆ. ಅದನ್ನು ಸವಿಯುವಾಗ ಅದೆಂತಹ ಸಂತೋಷ, ನೆಮ್ಮದಿ, ಸಡಗರ ಅಬ್ಬಬ್ಬಾ ಈ ಭಾಗದ ಪ್ರತಿಯೊಂದು ಇಂತಹ ಬಿದಿರಿನ ತಟ್ಟಿಯ ಹೋಟೆಲ್ ಗಳಿಗೆ ಹೋದರೇ ಅಲ್ಲಿಯ ಮಂಡಕ್ಕಿ ಮಿರ್ಚಿ ಪ್ರಪಂಚ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ.

ಹಾಂ ಹೇಳುವುದು ಮರೆತೆ, ಇಲ್ಲಿಯ ಮಿರ್ಚಿಗಳು ತುಂಬಾ ಮೃದು, ಪೊಳ್ಳು ಹಾಗೂ ರುಚಿಕರ. ಬಹುಶ: ಇಡೀ ಬಳ್ಳಾರಿ ಜಿಲ್ಲೆಯಲ್ಲಿಯೇ ಪ್ರತಿದಿನ ಎಷ್ಟು ಕ್ವಿಂಟಾಲ್ ಹಸಿಕಡಲೆ ಹಿಟ್ಟು ಖರ್ಚಾಗುವುದೋ ಗೊತ್ತಿಲ್ಲ.

ಬಹುಶ: ಬಳ್ಳಾರಿ ಜಿಲ್ಲೆಯ ಬಗ್ಗೆ ಅಧ್ಯಯನ ಮಾಡಬೇಕಾದರೆ ಅತ್ಯಂತ ಮುಖ್ಯವಾದುದು ಎಂದರೆ ಇಲ್ಲಿಯ ತಿನಿಸು ” ಮಂಡಕ್ಕಿ – ಮಿರ್ಚಿ “. ಇದೊಂದು ಅಧ್ಯಯನ ಯೋಗ್ಯ ವಿಷಯವೆಂದೇ ನನ್ನ ನಂಬಿಕೆ. ನಿಮಗಿನ್ನೂ ನಂಬಿಕೆ ಬಂದಿಲ್ಲವೇ ? ಒಮ್ಮೆ ಬನ್ನಿ ಈ ಭಾಗದಲ್ಲಿ ಅದರಲ್ಲೂ ಕೂಡ್ಲಿಗಿ, ಕೊಟ್ಟೂರು ಪಟ್ಟಣಗಳಿಗೆ ಒಮ್ಮೆ ಭೇಟಿ ನೀಡಿ. ಅದರಲ್ಲೂ ಪುಟ್ಟ ಕ್ಯಾಂಟೀನ್ ಗಳಿಗೇ ಹೋಗಬೇಕು. ಅಲ್ಲಿಯೇ ಇಂತಹ ರುಚಿಕರ ಮಂಡಕ್ಕಿ – ಮಿರ್ಚಿ ಸಿಕ್ಕುವುದು.
ಬನ್ನಿ ಒಮ್ಮೆ……………………