ಅನುದಿನ ಕವನ-೩೮ (ಕವಿ: ವೈಲೇಶ್ ಪಿ ಎಸ್ ಕೊಡಗು)

ಕವಿ ವೈಲೇಶ್ ಪಿ ಎಸ್ ಕೊಡಗು ಅವರ ಕಿರುಪರಿಚಯ:

ಅಂಕಿತ ನಾಮ (ಮುಕ್ತಕ) ಬೊಮ್ಮಲಿಂಗ.

ಕಾವ್ಯ ನಾಮ ಕವಿತೆಗಳಿಗೆ ಶಿವೈ ವೈಲೇಶ್ ಪಿ ಎಸ್ ಕೊಡಗು.
ಜನ್ಮದಿನಾಂಕ: ೧/೬/೧೯೬೫
ಜನ್ಮ ಸ್ಥಳ:- ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮ
ಜನನಿ ಜನಕರು: ಪೌತಿ ಪಿ ಕೆ ಸಿಡ್ಲಯ್ಯ. ಪೌತಿ ಪಿ ಎಸ್‌ ಕಾಳಮ್ಮ.
ಹಾಲಿ ವಾಸ:- ವಿರಾಜಪೇಟೆ
ವೃತ್ತಿ :ಕರಾರಸಾಸಂಸ್ಥೆಯ ಚಾಲಕ ಬೋಧಕ. ಮಡಿಕೇರಿ ಘಟಕ. ಪುತ್ತೂರು ವಿಭಾಗ

ಪ್ರವೃತ್ತಿ:ಓದು, ಬರಹ, ಸಾಹಿತ್ಯ ಸಂಘಟನೆ,
ಸಾಹಿತ್ಯದ ಸೇವೆಯ ವಿವರ:ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು, ಸಾಹಿತ್ಯ ಸಂವರ್ಧಕ ಪರಿಷತ್ತು ಎಂಬ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ವತಿಯಿಂದ ಹದಿನಾರು ಜಿಲ್ಲಾ ಮಟ್ಟದ ಪ್ರತ್ಯಕ್ಷ ಕವಿಗೋಷ್ಠಿಗಳು, ಏಳು ರೇಡಿಯೋ ಕವಿಗೋಷ್ಠಿಗಳು ಹತ್ತು ಅಂತರ್ಜಾಲ ತಾಣದ ವಾಟ್ಸ್ ಆಪ್ ಗ್ರೂಪ್‌ನ ೧೭ನೆಯ ಕವಿಗೋಷ್ಠಿ ನಡೆಯುತ್ತಿದೆ. ಸಾಹಿತ್ಯ ಸಾಹಿತ್ಯ ಸಂವರ್ಧಕ ಪರಿಷತ್ತು ವಾಟ್ಸ್‌ಆಪ್ ಬಳಗದಲ್ಲಿ ಪ್ರತಿ ಮಂಗಳವಾರದಂದು ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.

ಪ್ರಶಸ್ತಿ ಸನ್ಮಾನಗಳು: ಹಲವಾರು ಸಂಘ ಸಂಸ್ಥೆಗಳು ಸತ್ಕರಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತು ೨೦೧೯ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸುವುದು ವಿಶೇಷ.

ಕೃತಿಗಳು: ಅಮ್ಮ ನಿಮಗಾಗಿ, . “ಕಣ್ಮರೆಯಾದ ಹಳ್ಳಿ” ಕವನ ಸಂಕಲನಗಳು ಪ್ರಕಟವಾಗಿವೆ. “ಬೊಮ್ಮಲಿಂಗನ ಸಗ್ಗ” ಕೃತಿ ಇತ್ತೀಚೆಗೆ ಲೋಕಾರ್ಪಣೆ ಗೊಂಡಿದೆ.
ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಜರುಗಿದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಕಳೆದ ವರ್ಷ ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ.

ಇಂದಿನ ‘ಅನುದಿನದ ಕವನ’ ಗೌರವಕ್ಕೆ ಕವಿ ವೈಲೇಶ್ ಪಿ ಎಸ್ ಅವರು
ಭಾಮಿನೀ ಷಟ್ಪದಿಯಲ್ಲಿ ರಚಿಸಿದ
ಕಾವ್ಯ ಪಾತ್ರವಾಗಿದೆ.👇

ನಲ್ಲ ನುಡಿಗಳ ಸೊಲ್ಲದಡಗಿರೆ
ಮೆಲ್ಲ ಮೂಡಿವೆ ಕಳ್ಳ ಸುಳ್ಳರ
ಹೊಲ್ಲ ಮನದಲಿ ಕಲ್ಲಿನೇಟಿನ ಹಾಗೆಯಪನಿಂದೆ
ಬೆಲ್ಲದಂತಹ ಬಿಲ್ಲು ನುಡಿಯಲಿ
ಸಲ್ಲದವರಿಗೆ ಗೆಲ್ಲನೆಬ್ಬಿಸೆ
ಗುಲ್ಲು ಹಬ್ಬಿಸಿ ಗಲ್ಲಿಗೇರಿಸೆ ಕಾದ ಹಾಗಿಹುದೇ

ಎಲ್ಲ ಸಲ್ಲಿಸಿ ಗೆಲ್ಲು ಮೂಡಿಸಿ
ಸಲ್ಲುವಂತಹ ಹುಲ್ಲು ಬೆಳೆಸುತ
ಜೊಲ್ಲು ಗ್ರಂಥಿಗೆ ಬೆಲ್ಲವುಣಿಸಿದ ಸಂಸ್ಥೆ ನಮದಾಗೆ
ಅಲ್ಲಿಯಿಲ್ಲಿಯದೆಲ್ಲು ಸಲ್ಲದೆ
ಪೊಳ್ಳು ಕಲ್ಲುಗಳೆಸೆವ ಮೂರ್ಖರ
ಜೊಳ್ಳು ಡೊಳ್ಳಿಗೆ ಕಳ್ಳು ಬಳ್ಳಿಗೆ ದೋಹ ಸುರಿಬೇಕೆ

ನಾನುಯೆನ್ನದೆ ನೀನುಯೆಂದರೆ
ಬೋನ ಹುಟ್ಟಿಸೆ ಜೇನು ಸುರಿಸುವ
ಬಾನ ಮೇಗಳ ಭಾನು ನಗುವನು ಸತ್ಯವೇನಣ್ಣಾ
ಜಾಣನೋರ್ವಗೆ ಮಾತು ಚಾವಟಿ
ಕೋಣಗಾದರೆ ಚಾಟಿಯೇಟಿನ
ಬಾಣ ಬೀಸಲು ತಾಣವರಿವುದು ಕೇಳಿ ಹೇಳಣ್ಣಾ

-ಶಿವೈ
ವೈಲೇಶ್ ಪಿ ಎಸ್ ಕೊಡಗು